ನಾರಾಯಣ ಆಸ್ಪತ್ರೆಯಿಂದ ಕ್ಯಾನ್ಸರ್ ಗೆದ್ದ ಮಕ್ಕಳು – ಕುಟುಂಬದ ಸ್ನೇಹ ಸಮ್ಮಿಲನ

ಮೈಸೂರು: ಅಂತರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನದ ಪ್ರಯುಕ್ತ ಮೈಸೂರಿನ ನಾರಾಯಣ ಆಸ್ಪತ್ರೆಯು ಕ್ಯಾನ್ಸರ್ ಗೆದ್ದವರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡು ದೈರ್ಯ ತುಂಬಲಾಯಿತು.

ಮೈಸೂರಿನ ದಿ ಏಟ್ರಿಯಮ್ ಬೊಟಿಕ್ ಹೋಟೆಲ್‌ ನಲ್ಲಿ ಆಯೋಜಿಸಿದ್ದ ಬಾಲ್ಯದ ಕ್ಯಾನ್ಸರ್ ಗೆದ್ದವರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಗೆದ್ದ 30ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡು ತಮ್ಮ ಸ್ಫೂರ್ತಿದಾಯಕ ಕತೆಗಳನ್ನು ಹಂಚಿಕೊಂಡರು.

ಐಎಪಿ ಮೈಸೂರು 2025ರ ಅಧ್ಯಕ್ಷರು ಮತ್ತು ಪೀಡಿಯಾಟ್ರಿಕ್ ಕನ್ಸಲ್ಟೆಂಟ್ ಡಾ. ಶ್ರೀನಿವಾಸ್ ಬಿ ಹೆಚ್, ಮೈಸೂರಿನ ನಾರಾಯಣ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ರವಿ ಎಂ ಎನ್, ಪೀಡಿಯಾಟ್ರಿಕ್ ಕ್ರಿಟಿಕಲ್ ಕೇರ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಯಶವಂತ್ ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಪುಟಾಣಿಗಳ ಧೈರ್ಯವನ್ನು ಶ್ಲಾಘಿಸಲಾಯಿತು ಮತ್ತು ಚಿಕಿತ್ಸೆ ಹೊರತಾಗಿ ಅವರಿಗೆ ಭಾವನಾತ್ಮಕ, ಔಷಧೀಯ ನೆರವು ನೀಡುವ ಮಹತ್ವದ ಕುರಿತು ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಶ್ರೀನಿವಾಸ್ ಬಿ.ಎಚ್ ಅವರು, ಮಕ್ಕಳಲ್ಲಿ ಕ್ಯಾನ್ಸರ್ ರೋಗವನ್ನು ಕಾಣುವುದು ಬಹಳ ಬೇಸರದ ವಿಷಯವಾಗಿದೆ. ಆದರೆ ಈ ಮಕ್ಕಳು ತೋರುವ ಧೈರ್ಯ ಮಾತ್ರ ಅಸಾಧಾರಣವಾದುದಾಗಿದೆ ಎಂದು ಹೇಳಿದರು.

ಅತ್ಯಾಧುನಿಕ ಚಿಕಿತ್ಸೆ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲದಿಂದ ಕ್ಯಾನ್ಸರ್ ನಿಂದ ಗುಣಮುಖರಾಗುವ ಕಡೆ ಸಾಗಬಹುದಾಗಿದೆ. ಎಂದು ತಿಳಿಸಿದರು.

ಡಾ. ರವಿ ಎಂ ಎನ್ ಅವರು ಮಾತನಾಡಿ, ಬಾಲ್ಯದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದು ಎಂದರೆ ಕೇವಲ ವೈದ್ಯಕೀಯ ಕೆಲಸ ಮಾಡುವುದಷ್ಟೇ ಅಲ್ಲ. ಬದಲಿಗೆ ಪ್ರತೀ ಹಂತದಲ್ಲೂ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಮಾಡಬೇಕು, ಅವರು ನಿರಾಳವಾಗಿ ಇರಬೇಕು,ಆ ನಿಟ್ಟಿನಲ್ಲಿ ನಾರಾಯಣ ಆಸ್ಪತ್ರೆಯು ಅತ್ಯದ್ಭುತ ವಾತಾವರಣವನ್ನು ನಿರ್ಮಿಸಿದ್ದು, ಮಕ್ಕಳು ಮತ್ತು ಅವರ ಕುಟುಂಬಕ್ಕೆ ಬೇಕಾದ ನೆರವು ಒದಗಿಸಿ ಧೈರ್ಯವಾಗಿ ನಿಲ್ಲಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮೈಸೂರಿನ ನಾರಾಯಣ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ-ಆಂಕೊಲಾಜಿ ವಿಭಾಗದ ಕನ್ಸಲ್ಟೆಂಟ್ ಡಾ. ತರಂಗಿಣಿ ದುರುಗಪ್ಪ ಅವರು, “ಸೂಕ್ತ ಸಮಯದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ನಿಂದ ಮುಕ್ತಿ ಹೊಂದಬಹುದಾಗಿದೆ ಎಂದು ತಿಳಿಸಿದರು.

ಚಿಕಿತ್ಸೆಯ ನಂತರ ಭಾವನಾತ್ಮಕ ನೆರವು ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಇಂತಹ ಸ್ನೇಹ ಸಮ್ಮಿಲನಗಳು ಬಹಳ ಮುಖ್ಯವಾಗಿವೆ ಎಂದು ಅಭಿಪ್ರಾಯ ಪಟ್ಟರು.