ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ
ಗುಬ್ಬಚ್ಚಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಮಾನವನ ಆಧುನಿಕ ಜೀವನದಿಂದಾಗಿ ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ವಿಷಾದಿಸಿದರು.
ನಗರದ ಮಹಾರಾಜ ಮೈದಾನದ ಮುಂಭಾಗ ಕೆ ಎಂ ಪಿ ಕೆ ಟ್ರಸ್ಟ್ ಹಮ್ಮಿಕೊಂಡಿದ್ದ
ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಹಬ್ಬ ಆಚರಣೆ ವೇಳೆ ಮರಗಳಲ್ಲಿ ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಸ್ನೇಕ್ ಶ್ಯಾಮ್ ಚಾಲನೆ ನೀಡಿ ಮಾತನಾಡಿದರು.
ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಸಲಹೆ ನೀಡಿದರು.
ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನಪ್ಪುತ್ತಿದೆ.
ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಉರಗ ತಜ್ಞ ತಿಳಿಹೇಳಿದರು.
ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ,ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಚಿತ್ರನಟ ಆದಿ ಲೋಕೇಶ್ ಮಾತನಾಡಿ,ಇಂದಿನ ದಿನಗಳಲ್ಲಿ
ಗುಬ್ಬಿ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಡಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಬ್ಬಚ್ಚಿ ದಿನ ಮಾತ್ರ ಪಕ್ಷಿಗಳಿಗೆ ನೀರು ಆಹಾರ ನೀಡುವುದು ಮುಖ್ಯವಲ್ಲ ಪ್ರತಿದಿನವೂ ಪಕ್ಷಿ ಸಂಕುಲನವನ್ನು ಉಳಿಸಲು ತಮ್ಮ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರಿನ ಬಟ್ಟಲು ಅಳವಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎನ್.ಎಂ ನವೀನ್ ಕುಮಾರ್ ಮಾತನಾಡಿ,
ಜನಸಂಖ್ಯೆಗಿಂತ ವಾಹನ ಸಾಂದ್ರತೆ ಹೆಚ್ಚಾಗಿರುವುದರಿಂದ ಪರಿಸರ ವಿಕೋಪಕ್ಕೆ ತೆರಳಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂಕುಲ ನಾಶವಾಗುತ್ತಿದೆ ಎಂದು ಕಳವಳ ಪಟ್ಟರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆ, ಹವಮಾನ ಬದಲಾವಣೆ,ಪ್ರಕೃತಿ ವಿಕೋಪದ ಮುನ್ಸೂಚನೆ ಕೊಡುವುದರಲ್ಲಿ ಪ್ರಾಣಿಪಕ್ಷಿಗಳೇ ಮೊದಲು. ಹಾಗಾಗಿ ನಾಗರೀಕತೆಯೊಂದಿಗೆ ಉತ್ತಮ ಒಡನಾಟದಲ್ಲೆ ಜೀವಿಸುವ ಪ್ರಾಣಿಪಕ್ಷಿಗಳಿಗೆ ಇಂತಹ ರಣಬಿಸಿಲಿನಲ್ಲಿ ಒಂದಷ್ಟು ನೀರು ಆಹಾರ ನೀಡುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.

ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ,ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ,
ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ, ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ
ಎಂಬ ಘೋಷವಾಕ್ಯವುಳ್ಳ ನಾಮಫಲಕ ಪ್ರದರ್ಶಿಸುವ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಿದರು.
ವನ್ಯಜೀವಿ ಮಂಡಳಿಯ ರಾಜ್ಯ ಸದಸ್ಯರಾದ ಡಾ. ಸಂತೃಪ್ತಿ ಗೌಡ,ಕೆ ಆರ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರಮೇಶ್ ಕುಮಾರ್, ಸೌಮ್ಯ ಆದಿ ಲೋಕೇಶ್, ಕಿರುತರೆ ನಟ ಮಹೇಂದರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವೈದ್ಯರಾದ ಶ್ರೀನಿವಾಸ್ ಆಚಾರ್,ಶ್ರೀನಿವಾಸ್ ಭಾಷ್ಯಂ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುಚೇಂದ್ರ, ಮಹಾನ್ ಶ್ರೇಯಸ್, ಮಿರ್ಲೆ ಪನಿಷ್, ರಾಕೇಶ್,
ಮತ್ತಿತರರು ಹಾಜರಿದ್ದರು.