ಕೆ ಆರ್ ಆಸ್ಪತ್ರೆಯಲ್ಲಿ ಬಡರೋಗಿಗಳ ಪಾಡು ಕೇಳೋರೇ ಇಲ್ಲ:ವಿಕ್ರಂ ಅಯ್ಯಂಗಾರ್

Spread the love

ಮೈಸೂರು: ಮೈಸೂರಿನ ಮಹಾರಾಜರ ಕಾಲದಲ್ಲಿ ಪ್ರಾರಂಭವಾದ ಕೆ ಆರ್ ಆಸ್ಪತ್ರೆ
ಅಧೊಗತಿಯತ್ತ‌ ಸಾಗಿದೆ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ
ವಿಕ್ರಂ ಅಯ್ಯಂಗಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾರಾಜರ ಕಾಲದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾರಂಭವಾದ ಕೃಷ್ಣ ರಾಜೇಂದ್ರ ಆಸ್ಪತ್ರೆ ಒಂದಾನೊಂದು ಕಾಲದಲ್ಲಿ ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಆಸ್ಪತ್ರೆ ಎಂದು ಖ್ಯಾತಿ ಪಡೆದಿತ್ತು, ಇತ್ತೀಚೆಗಿನ ದಿನಗಳಲ್ಲಿ ದಿನೇ ದಿನೇ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಕ್ರಂ ಅಯ್ಯಂಗಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರ, ದರ್ಪ,ಅಧಿಕಾರಿಗಳ ಒಳಜಗಳ ಮತ್ತಿತರ ಅನೇಕ ಕಾರಣಗಳಿಂದ ಬಡರೋಗಿಗಳು ದಿನೇ ದಿನೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರೋಗಿಗಳ ಜೊತೆಗೆ ಬಂದವರಿಗೆ ಆಸ್ಪತ್ರೆ ಸಿಬ್ಬಂದಿ ಕನಿಷ್ಠ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ ಮತ್ತು ಮಾನವೀಯತೆ ತೋರುವುದಿಲ್ಲ, ಹಣ ನೀಡಿದವರಿಗೆ ಸೌಲಭ್ಯ ಸಿಗುತ್ತದಯೇ ಹೊರತು ಬಡವರನ್ನು ಬೀದಿ ನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ನೂರಾರು ನಿರಾಶಿತರು ಚಳಿ ತಾಳಲಾರದೆ ಸಾವನಪ್ಪಿದ್ದಾರೆ ಎಂದು ವಿಷಾದಿಸಿದ್ದಾರೆ.

ಇಂದೂ ಕೂಡಾ ಒಬ್ಬ ವ್ಯಕ್ತಿ ಚಳಿ ತಾಳದೇ ಸಾವನ್ನಪ್ಪಿದ ಘಟನೆ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಕೂಡಲೇ ಇದಕ್ಕೆ ಕಾರಣರಾದ ಸಿಬ್ಬಂದಿಯನ್ನು ನಿರ್ದಾಕ್ಷಿಣ್ಯವಾಗಿ ಸೇವೆಯಿಂದ ವಜಾಮಾಡಿ ಬಡ ರೋಗಿಗಳಿಗೆ, ನೊಂದವರಿಗೆ ನ್ಯಾಯ ಕೊಡಿಸಲು ಸರ್ಕಾರ ಮುಂದಾಗಬೇಕು ಎಂದು ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.

ಚಳಿಗಾಲದಲ್ಲಿ ಹೊದಿಕೆ ವಿತರಣೆ ಮಾಡಲು ಸಂಘ ಸಂಸ್ಥೆಗಳು ಮುಂದಾಗಿ ಈಗಾಗಲೇ ಈ ಕೆಲಸದಲ್ಲಿ ತೊಡಗಿವೆ. ಆದರೆ ಮೈಸೂರು ಮಹಾನಗರ ಪಾಲಿಕೆ ಕಣ್ಮುಚ್ಚಿ ಕುಳಿತಿದೆ, ನಿರಾಶ್ರಿತರ ಅಭಿವೃದ್ದಿ ಮಂಡಲಿಯವರು ಕೂಡಾ ನಿದ್ರೆಯಲ್ಲಿದ್ದಾರೆ ಎಂದು ಸಾರ್ವಜನಿಕರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.