ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಸಿಡಿದೆದ್ದ ಜನತೆ

Spread the love

ಮೈಸೂರು: ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಜನತೆ ಸಿಡಿದೆದ್ದು ಹೋರಾಟಕ್ಕಿಳಿದ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ
ಡಿ ಎಚ್ ಒ ಕುಮಾರಸ್ವಾಮಿ ಅವರು ಪರಿಸ್ಥಿತಿ ಅವಲೋಕಿಸಿದರು.

ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಮಹಾಲಕ್ಷ್ಮಿ ವಿರುದ್ಧ ಸ್ಥಳೀಯರು
ಪ್ರತಿಭಟನೆ ನಡೆಸಿದರು.

ಈ ಕೂಡಲೇ ವೈದ್ಯೆ ಮಹಾಲಕ್ಷ್ಮಿ ಅವರನ್ನು ವರ್ಗಾವಣೆ ಮಾಡಬೇಕು ಇಲ್ಲವಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಮುಚ್ಚಿಬಿಡಿ ಎಂದು ಎಂದು ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ‌ ಭರತ್ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಾಧಿಕಾರಿಗಳ ದುರ್ನಡತೆ ಒಂದೆಡೆಯಾದರೆ,ಇಡೀ ಆರೋಗ್ಯ ಕೇಂದ್ರ ಗಬ್ಬು ನಾರುತಿದ್ದು ಈ ಆಸ್ಪತ್ರೆಗೇ ಮೊದಲು ಸರ್ಜರಿ ಮಾಡಬೇಕಿದೆ ಎಂದು ಸಾರ್ವಜನಿಕರು ಕಿಡಿಕಾರಿದರು.

ಶ್ರೀಧರ್,ಮಹಾಲಕ್ಷ್ಮಿ,ಚನ್ನಾಜಮ್ಮ ಸೇರಿದಂತೆ ಹಲವಾರು ಮಂದಿ ವೈದ್ಯೆ ಮಹಾಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೈದ್ಯೆ ರೋಗಿಗಳನ್ನು ಮುಟ್ಟಿ ತಪಾಸಣೆ ಮಾಡುವುದಿರಲಿ ಸರಿಯಾಗಿ ಮಾತನಾಡಿಸದೆ ದೂರ ನಿಲ್ಲಿಸಿ ಎಲ್ಲರಿಗೂ ಒಂದೇ ರೀತಿ ಮಾತ್ರೆ ಬರೆದುಕೊಡುತ್ತಾರೆ,ಹಿಂದೆ ಇದ್ದ ಚಂದ್ರಶೇಖರ್ ಎಂಬ ವೈದ್ಯರು ಚೆನ್ನಾಗಿ ಮಾತನಾಡಿಸಿ,ತಪಾಸಣೆ ಮಾಡಿಯೇ ಔಷಧಿ ಕೊಡುತ್ತಿದ್ದರು,ಈಗಿನ ವೈದ್ಯೆ ಸರಿ ಇಲ್ಲ.ಇವರನ್ನು ತೆಗೆದು ಬೇರೆ ಡಾಕ್ಟರ್ ಕೊಡಲಿ ಎಂದು ಒತ್ತಾಯಿಸಿದರು.

ಜನರ ಹೋರಾಟ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಡಿ ಎಚ್ ಒ ಕುಮಾರಸ್ವಾಮಿ ಅವರಲ್ಲಿ ವೈದ್ಯಾಧಿಕಾರಿ ಮಹಾಲಕ್ಷ್ಮಿಯನ್ನು ವರ್ಗಾಯಿಸಿ ಉತ್ತಮ ವೈದ್ಯರನ್ನು ನೇಮಿಸಿ ಎಂದು ಜನರು ಒತ್ತಾಯಿಸಿದರು.

ಸ್ವತಃ ಕುಮಾರಸ್ವಾಮಿ ಯವರು ಇಡೀ ಆಸ್ಪತ್ರೆ ತಪಾಸಣೆ ಮಾಡಿದರು.ಎಲ್ಲಾ ಕಡೆ ಗಬ್ಬು‌ ವಾತಾವರಣ ಅನಾವರಣಗೊಂಡಿತು.
ಶೌಚಲಯ ನೋಡಿದರೆ ವಾಕರಿಕೆ ಬರುವಂತಿತ್ತು‌.ಇದನ್ನು ಕಂಡು ಅವರೇ ಬೇಸರಪಟ್ಟರು.

ಜನರ ಅಹವಾಲು ಸ್ವೀಕರಿಸಿ,ಬೇರೆ ವೈದ್ಯರನ್ನು ನೇಮಿಸುವುದಾಗಿ ಡಿಎಚ್ಒ ಕುಮಾರಸ್ವಾಮಿ ಅವರು ಭರವಸೆ ನೀಡಿದರಲ್ಲದೆ ವಾರದೊಳಗೆ ಈ ಆರೋಗ್ಯ ಕೇಂದ್ರವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಪ್ರತಿಭಟನೆ‌ ವೇಳೆ ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಸ್ಥಳೀಯ ಮುಖಂಡರಾದ ಜಿ ರಾಘವೇಂದ್ರ,ಕಿಶೋರ್ ಕುಮಾರ್, ಸಚಿನ್,ಚರಣ್, ಗೋಪಾಲಕೃಷ್ಣ, ವಿನೋದ್ ಅರಸ್, ಮಂಜುನಾಥ್, ವೆಂಕಟೇಶ್ ಸೇರಿದಂತೆ ನೂರಾರು ಜನ ಆರೋಗ್ಯ ಕೇಂದ್ರದ ಬಳಿ ಜಮಾಯಿಸಿ ಪ್ರತಿಭಟಿಸಿ ವೈದ್ಯೆ ಮಹಾಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.