ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮಹಾಶಿವರಾತ್ರಿಯ ಸಡಗರ ಸಂಭ್ರಮ ಮನೆ ಮಾಡಿದೆ.
ಮೈಸೂರಿನ ವಿವಿಧ ಶಿವಾಲಯಗಳಲ್ಲಿ ಮಹೇಶ್ವರನಿಗೆ ಅಭಿಷೇಕ, ಪೂಜೆ ವಿಜೃಂಭಣೆಯಿಂದ ನೆರವೇರಿವೆ.
ಶಿವಭಕ್ತರಿಂದ ಹರನಾಮ ಸ್ತುತಿ ಮುಗಿಲು ಮುಟ್ಟಿದೆ.
ಮಹಾ ಶಿವರಾತ್ರಿ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿರುವ ತ್ರಿಣೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ಮುಖವಾಡ ಧಾರಣೆ ಮಾಡಲಾಗಿದೆ.
ತ್ರಿಣೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೇರವೇರಿದೆ.
ತ್ರಿಣೇಶ್ವರ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ. ಇದನ್ನು
ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
11 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು
1952ರಲ್ಲಿ ಹರಕೆ ರೂಪದಲ್ಲಿ ನೀಡಲಾಗಿದ್ದು, ಶ್ರೀ ಕಂಠದತ್ತನರಸಿಂಹರಾಜ ಒಡೆಯರ್ ಜನ್ಮದಿನದ ನೆನಪಿನಾರ್ಥ ಚಿನ್ನದ ಮುಖವಾಡ ಧಾರಣೆ ಮಾಡಲಾಗುತ್ತದೆ.

ಶಿವನ ದರುಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.ನಾಳೆ ಗುರುವಾರ ಬೆಳಿಗ್ಗೆ 11 ಗಂಟೆ ವರೆಗೆ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ಜಿಲ್ಲಾ ಖಜಾನೆಗೆ ಚಿನ್ನದ ಮುಖವಾಡವನ್ನು ರವಾನಿಸಲಾಗುತ್ತದೆ.
ಚಿನ್ನದ ಮುಖವಾಡ ಧಾರಣೆ ಮಾಡಿದ ಶಿವಲಿಂಗ ದರುಶನ ಮಾಡಿ ಭಕ್ತರು ಪುನೀತರಾಗಿದ್ದಾರೆ.
ಭಕ್ತರಿಗೆ ಪ್ರಸಾದ ವಿನಯೋಗ ವ್ಯವಸ್ಥೆ ಮಾಡಲಾಗಿದೆ.

ಹಾಗೆಯೇ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶಿವ ದೇವಾಲಯ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಈಶ್ವರನಿಗೆ ವಿಶೇಷ ಪೂಜೆಯನ್ನು ಇಂದು ಬೆಳಗಿನಿಂದ ನೆರವೇರಿಸಲಾಗಿದ್ದು,ನಾಳೆ ಮುಂಜಾನೆವರೆಗೂ ಪೂಜೆ ಸಲ್ಲಿಸಲಾಗುತ್ತದೆ.

ಅರಮನೆ ಆವರಣದಲ್ಲಿರುವ ತ್ರಿಣೇಶ್ವರ ದೇವಾಲಯಕ್ಕೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತ್ನಿ ತ್ರಿಶಿಕಾ ಮತ್ತು ಇಬ್ಬರು ಮಕ್ಕಳೊಂದಿಗೆ ಭೇಟಿ ನೀಡಿ ತ್ರಿಣೇಶ್ವರನ ದರ್ಶನ ಪಡೆದರು.
