ಕಾಲೇಜು ಮಕ್ಕಳ ಕಲಿಕೆಗೆ ಡಿಜಿಟಲ್‌ಮಾಧ್ಯಮ ಬೋಧನಾ ಕ್ರಮ ಒಳಿತು:ಪ್ರೊ. ಲೋಕನಾಥ್

ಮೈಸೂರು: ಪಿಯು ಕಾಲೇಜು ಮಕ್ಕಳ ಕಲಿಕೆಗೆ ಇಂದಿನ ಡಿಜಿಟಲ್ ಉಪಕರಣಗಳ ಬಳಕೆಯು ವಿಷಯಾಸಕ್ತಿ ಹೆಚ್ಚಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯ
ಕುಲಪತಿಗಳಾದ ಪ್ರೊ. ಲೋಕನಾಥ್ ಎನ್. ಕೆ ತಿಳಿಸಿದರು.

ಮೈಸೂರು ನಗರದ ಶ್ರೀ ಸತ್ಯಸಾಯಿಬಾಬಾ ಪಿಯು ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಪದವಿ ಪೂರ್ವ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಈ ಸಾಲಿನ ಕೈಪಿಡಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಲಿಕೆಯಲ್ಲಿ ವಿವಿಧ ಹಂತಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಕುತೂಹಲಕಾರಿ ವಿಷಯಗಳ ಬೋಧನೆ ಮತ್ತು ಶಿಸ್ತಿನ ಬೋಧನೆ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕರಾದ ಮರಿಸ್ವಾಮಿ. ಎಂ. ಅವರು ಜಿಲ್ಲೆಯ ವಿದ್ಯಾರ್ಥಿಗಳ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವೇದಿಕೆ ಸಿದ್ದಪಡಿಸಿರುವ ಕೈಪಿಡಿ ಅತ್ಯಂತ ಸಹಕಾರಿ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರದ 2024ನೇ ಸಾಲಿನ ಉತ್ತಮ ಪ್ರಾಂಶುಪಾಲರು ಪ್ರಶಸ್ತಿಗೆ ಭಾಜನರಾದ ರಾಮೇಗೌಡ ಅವರನ್ನು ಈ ವೇಳೆ ವೇದಿಕೆಯ ವತಿಯಿಂದ ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ,ರಾಜ್ಯ ವೇದಿಕೆಯ ಕಾರ್ಯಾಧ್ಯಕ್ಷ ರಾಮೇಗೌಡ.ಎ, ಜಿಲ್ಲಾ ವೇದಿಕೆಯ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಬಿ ಸಣ್ಣಗೌಡ, ಖಜಾಂಚಿ ಎಂ.ಎ.ಚೇತನ್ ಉಪಸ್ಥಿತರಿದ್ದರು.