ಮೈಸೂರು: ಪಾರಂಪರಿಕ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪುನರ್ ನಿರ್ಮಾಣ ಅಥವಾ ಪುನರ್ ನವೀಕರಣ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಬೇಕಾದ ಕಾರಣ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಇಂಟಾಚ್ ತಂಡ ಮೈಸೂರಿಗೆ ಭೇಟಿ ನೀಡಿತು.
ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್(ಇಂಟಾಚ್) ತಂಡ ಲ್ಯಾನ್ಸ್‌ಡೌನ್ ಕಟ್ಟಡದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿತು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಇಂಟಾಚ್ ತಂಡ ಗುರುವಾರ ಮೈಸೂರಿಗೆ ಆಗಮಿಸಿ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪರಿಶೀಲಿಸಿ ಅಧ್ಯಯನ ನಡೆಸಿತು.

ಇಂಟಾಚ್ ತಂಡದ ರಘುನಾಥ್ ಅವರ ನೇತೃತ್ವದಲ್ಲಿ ಮನೀಷ್, ಸಿದ್ದಾರ್ಥ, ಜೀತಾ, ಅಮೃತಾ ಅವರು ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.
ಮಾರುಕಟ್ಟೆ ಕಟ್ಟಡ ಕುಸಿದು ಬಿದ್ದಿರುವ ಪ್ರದೇಶ, ದುಸ್ಥಿತಿಯಲ್ಲಿರುವ ಮಳಿಗೆಗಳು, ಹಣ್ಣು ಅಂಗಡಿಗಳ ಮಾರ್ಗ, ತರಕಾರಿ ಮಳಿಗೆಗಳ ಮಾರ್ಗ ಇನ್ನಿತರೆ ಮಳಿಗೆಗಳ ವಿಡಿಯೋ ಹಾಗೂ ಫೊಟೋಗಳನ್ನು ತಂಡ ತೆಗೆದುಕೊಂಡಿತು.
ಕಳೆದ ವಾರವೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಪರಿಶೀಲಿಸಿ ಅಧ್ಯಯನ ನಡೆಸಿದ್ದ ಇಂಟಾಚ್ ತಂಡ ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಿದೆ.