ಮೈಸೂರು: ಮೈಸೂರು ದಸರಾ ಮಹೋತ್ಸವ- 2024 ಸ್ತಬ್ಧ ಚಿತ್ರ ಉಪ ಸಮಿತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಸ್ತಬ್ಧಚಿತ್ರಕ್ಕೆ ನೀಡಿದ ಪ್ರಥಮ ಬಹುಮಾನವನ್ನು ಇಲಾಖೆಯ ಅಧಿಕಾರಿಗಳು ಸ್ವೀಕಾರಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ, ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಹಾಗೂ ಕಲಾವಿದರಾದ ಪ್ರಸಾದ್ ಬಹುಮಾನ ಸ್ವೀಕಾರ ಮಾಡಿದರು.
1924ರ ಡಿಸೆಂಬರ್ 26 ಮತ್ತು 27ರಂದು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐತಿಹಾಸಿಕ 39ನೇ ಅಧಿವೇಶನ ನಡೆದಿತ್ತು.ಈ ವರ್ಷ ಅಧಿವೇಶನಕ್ಕೆ 100 ವರ್ಷಗಳು ತುಂಬಿದೆ.
ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಜಂಬೂ ಸವಾರಿಯ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ಈ ಎರಡು ಮಹತ್ವದ ಘಟನೆಗಳನ್ನು ಆಕರ್ಷಕವಾಗಿ ಬಿಂಬಿಸಿ ಸ್ತಬ್ದಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು.