ಮೈಸೂರು: ನಕ್ಸಲಿಂ ಅನ್ನು ಸಂಪೂರ್ಣ ತೊಡೆದುಹಾಕುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಯಾವುದೇ ಹೋರಾಟಗಳಾಗಲಿ ಶಾಂತಿಯುತವಾಗಿರಬೇಕೇ ಹೊರತು ಹಿಂಸಾತ್ಮಕ ದಾರಿ ಹಿಡಿಯಬಾರದೆಂಬುದು ಸರ್ಕಾರದ ನಿಲುವು ಎಂದು ಹೇಳಿದರು.
ಗುರುವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ನಕ್ಸಲರು ಶರಣಾಗಿದ್ದು, ಅವರ ಶಸ್ತ್ರಾಸ್ತ್ರಗಳನ್ನು ಮಹಜರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೋರಾಟುಗಳು ಸಂವಿಧಾನತ್ಮಕ ರೀತಿಯಲ್ಲಿ ನಡೆಯಬೇಕೆಂದು ಡಾ.ಅಂಬೇಡ್ಕರ್ ಅವರು ಹೇಳಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಂವಿಧಾನದಲ್ಲಿ ಅವಕಾಶವಿದ್ದರೂ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅವಕಾಶ ಯಾರಿಗೂ ನೀಡಲಾಗಿಲ್ಲ. ಶೃಂಗೇರಿಯಲ್ಲಿ ಮತ್ತೊಬ್ಬ ನಕ್ಸಲ್ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ ಅವರೂ ಕೂಡ ಕಾನೂನಿಗೆ ಶರಣಾಗಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಅಂಬೇಡ್ಕರ್ ಅವರ ಕುರಿತ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿಲ್ಲ, ಸಂವಿಧಾನದ ರಕ್ಷಣೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ, ಅದರ ಆಶಯಗಳ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರ ಕುರಿತು ಅಮಿತ್ ಶಾ ಅವರ ಹೇಳಿಕೆ, ಬಿಜೆಪಿಯವರಿಗೆ ಅಂಬೇಡ್ಕರ್ ಅವರ ಮೇಲಿನ ಅಗೌರವವನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದವರ ಕಾಲದಲ್ಲಿ ಸಂವಿಧಾನವನ್ನು ಅಂಬೇಡ್ಕರ್ ಅವರೇ ರಚಿಸಿದ್ದರು. ವಾಜಪೇಯಿಯವರ ಸರ್ಕಾರವಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಗೆ ಮುಂದಾಗಿದ್ದರು. ಸಂವಿಧಾನ ಬದಲಾವಣೆಗಾಗಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿಯ ಅನೇಕ ಸಚಿವರು ಹೇಳಿಕೆ ನೀಡಿದ್ದರು. ಆರ್ ಎಸ್ ಎಸ್ ನ ಪ್ರಮುಖರು ಸಂವಿಧಾನವನ್ನು ವಿರೋಧಿಸಿದ್ದರು ಎಂದು ಗರಂ ಆಗಿ ಸಿಎಂ ಹೇಳಿದರು.
ಆಶಾ ಕಾರ್ಯಕರ್ತರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿ, ಆಶಾ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗಿದೆ. ಈ ಮುಂಚೆ ಮಾಹೆಯಾನ 8000 ರೂ. ನೀಡಲಾಗುತ್ತಿದ್ದು, ಈಗ ಪ್ರೋತ್ಸಾಹಕಗಳೂ ಸೇರಿದಂತೆ ಪ್ರತಿ ಮಾಹೆ 10,000 ರೂ. ವೇತನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ, ಅವರು ಮುಷ್ಕರ ಕೈಬಿಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರದಲ್ಲಿ ಫೆಬ್ರವರಿ 15 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಚಾಮರಾಜನಗರ ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಸಭೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.
ಮೈಸೂರಿನ ರಸ್ತೆಯೊಂದಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವ ಬಗ್ಗೆ ರಾಜಕಾರಣ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನ್ನ 45 ವರ್ಷದ ರಾಜಕೀಯದ ಅವಧಿಯಲ್ಲಿ ಎಂದಿಗೂ ತನ್ನ ಹೆಸರಿನ್ನಿಡುವಂತೆ ತಿಳಿಸಲಿಲ್ಲ. ಹಿಂದೆ ಮೈಸೂರು ವಿಶ್ವವಿದ್ಯಾಲಯದವರು ನೀಡುವ ಡಾಕ್ಟರೇಟ್ ಅನ್ನು ನಾನು ನಿರಾಕರಿಸಿದ್ದೆ ಎಂದು ಸಿಎಂ ಸ್ಮರಿಸಿದರು.