ಮೈಸೂರು, ಏ.4: ಕಳೆದ ನಾಲ್ಕೈದು ದಶಕಗಳಿಂದ ಸಾಗುವಳಿ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ಕೊಡಿಸುವ ತನಕ ನೆಮ್ಮದಿ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ಗುಮಚನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೯೪-ಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು,ಹಕ್ಕುಪತ್ರ ಕೊಡುವ ಕುರಿತು ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ,ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಪ್ರತಿಯೊಂದು ಹಳ್ಳಿ ನನ್ನ ಊರು ಇದ್ದಂತೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೨೫ ವರ್ಷಗಳ ಕಾಲ ಸಿದ್ದರಾಮಯ್ಯ ಶಾಸಕರಾಗಿದ್ದರೆ,ಮೂರು ಬಾರಿಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಜಯಪುರ,ಗುಮಚನಹಳ್ಳಿ,ಹಾರೋಹಳ್ಳಿ,ಚಿಕ್ಕನಹಳ್ಳಿ ಮೊದಲಾದ ಊರುಗಳು ನಮ್ಮ ಊರಿನಂತೆ ಇವೆ. ಎಲ್ಲರೂ ನಮ್ಮ ಅಣ್ಣ-ತಮ್ಮಂದಿರೇ ಆಗಿದ್ದಾರೆ,ನಮ್ಮ ಮನೆಗೆ ದಾಖಲೆ ಇಲ್ಲವೆಂದು ಅನೇಕರು ಬರುತ್ತಿದ್ದರು. ದಾಖಲೆ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗೋದಿಲ್ಲ. ಮಾರಾಟಕ್ಕೆ ಅನಾನುಕೂಲವಾಗುತ್ತಿತ್ತು.ಅದನ್ನು ಮನಗಂಡು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ ಎಂದು ಜಿಟಿಡಿ ನುಡಿದರು.
ಸಾಗುವಳಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದಿದ್ದರೂ ಮತ್ತು ದಾಖಲೆಯಲ್ಲಿ ಹೆಸರು ಇದ್ದರೂ ಅರಣ್ಯಭೂಮಿ ಎನ್ನುವುದನ್ನು ತೋರಿಸಲಾಗಿದೆ. ಇದರಿಂದಾಗಿ ಹಕ್ಕು ಪತ್ರ ಕೊಡಲು ಕೆಲವು ಕಡೆ ಸಮಸ್ಯೆಯಾಗಿದೆ. ಇದು ಬರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸಮಸ್ಯೆಯಾಗಿಲ್ಲ ಅನೇಕ ಕ್ಷೇತ್ರಗಳಲ್ಲಿ ಉಂಟಾಗಿದೆ, ಹಾಗಾಗಿ, ಅರಣ್ಯ ಇಲಾಖೆ ಭೂಮಿ ಅಂತ ತೋರಿಸಿರುವ ಜಮೀನಿನಲ್ಲಿ ರೈತರು ಉಳುಮೆ ಮಾಡಿಕೊಂಡು ಬಂದಿದ್ದರೆ ಹಕ್ಕುಪತ್ರ ಕೊಡಿಸುವುದಕ್ಕೆ ತೀರ್ಮಾನ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಜಯಪುರ ಹೋಬಳಿಯ ಕೆಲವು ಗ್ರಾಮಗಳ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ.ಅವರಿಗೆ ಸಾಗುವಳಿ ಚೀಟಿ ಇದ್ದರೂ ಅರಣ್ಯ ಇಲಾಖೆ ಭೂಮಿಯಾಗಿ ಬಿಟ್ಟಿದೆ. ಇಂತಹದನ್ನು ಸರಿಪಡಿಸಿ ಹಕ್ಕುಪತ್ರ ನೀಡಬೇಕೆಂದು ತೀರ್ಮಾನಿಸಿ ಅನೇಕ ತಿಂಗಳಿಂದ ಶ್ರಮ ಪಟ್ಟಿದ್ದೇನೆ ಒಂದು ಒಳ್ಳೆಯ ಕೆಲಸಕ್ಕೆ ನಾನಾ ವಿಘ್ಞಗಳು ಎದುರಾದರೂ ಕೊನೆಗೂ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ಹಕ್ಕುಪತ್ರ ವಿತರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಸಂತಸ ಪಟ್ಟರು ಶಾಸಕರು.
ತಹಸಿಲ್ದಾರ್ ಮಹೇಶ್ ಕುಮಾರ್ ಅವರು ಒಂದು ವರ್ಷದಿಂದ ಶ್ರಮಪಟ್ಟು ಹಕ್ಕುಪತ್ರ ಕೊಡಲು ರೆಡಿಮಾಡಿದ್ದರು. ಆದರೆ,ಕೋರ್ಟ್ ಇರುವುದರಿಂದ ಮುಂದೊಂದು ದಿನ ಮಾಡುವಂತೆ ಹೇಳಿದರು. ಆದರೆ, ಒಂದಲ್ಲಾ ಒಂದು ಕಾರಣಕ್ಕಾಗಿ ವಿಳಂಬವಾಗುತ್ತಿದೆ. ನಿಮ್ಮ ಬದಲಿಗೆ ಉಪ ತಹಸಿಲ್ದಾರ್ ಅವರನ್ನೇ ಕಳುಹಿಸುವಂತೆ ಹೇಳಿದ್ದೆ.ಅದೇ ರೀತಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ವಿಡೀಯೋ ಕಾನ್ಫರೆನ್ಸ್ ಇದ್ದ ಕಾರಣಕ್ಕಾಗಿ ಬರಲು ಸಾಧ್ಯವಾಗಿಲ್ಲ.ಆದರೆ, ಉಳಿದ ಅಧಿಕಾರಿಗಳ ಸಮ್ಮುಖದಲ್ಲೇ ಕಾರ್ಯಕ್ರಮ ಮಾಡಿ ಹಕ್ಕುಪತ್ರ ನೀಡಲಾಗಿದೆ ಎಂದು ನುಡಿದರು.
ಉದ್ಬೂರು,ಗುಮಚನಹಳ್ಳಿ ಮೊದಲಾದ ಗ್ರಾಮಗಳಿಗೆ ಕುಡಿಯುವ ನೀರು,ರಸ್ತೆ,ಚರಂಡಿ,ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ. ಆಶ್ರಯ ಬಡಾವಣೆಗಾಗಿ ಇದ್ದ ತೊಡಕುಗಳನ್ನು ನಿವಾರಿಸಲು ಗಮನಹರಿಸಿದ್ದೇನೆ. ಆಶ್ರಯ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸಲ್ಲಿಸಿದರೆ ತಕ್ಷಣವೇ ಮಂಜೂರಾತಿ ದೊರೆಯಲಿದೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ ಮಂಡನಹಳ್ಳಿ ಗ್ರಾಮದಲ್ಲಿ ೩೮ ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ, ಶಾಸಕರ ವಿಶೇಷ ಅನುದಾನದಲ್ಲಿ ಮಂಡನಹಳ್ಳಿ-ಕಾಡನಹಳ್ಳಿ ರಸ್ತೆ ಕಾಮಗಾರಿ,ಶಾಲಾ ಕೊಠಡಿಗಳನ್ನು ಉದ್ಘಾಟನೆಯನ್ನು ಜಿ.ಟಿ.ದೇವೇಗೌಡ ನೆರವೇರಿಸಿದರು.