ಬ್ರಾಹ್ಮಣ ಜಾತಿ ಅಪಮಾನ ಖಂಡಿಸಿ ದೂರು ದಾಖಲಿಸಲು ಬ್ರಾಹ್ಮಣ ಮುಖಂಡರ ನಿರ್ಧಾರ

Spread the love

ಮೈಸೂರು: ಬ್ರಾಹ್ಮಣ ಜಾತಿ ಅಪಮಾನ ಖಂಡಿಸಿ ದೂರು ದಾಖಲಿಸಲು ಬ್ರಾಹ್ಮಣ ಮುಖಂಡರು ನಿರ್ಧಾರ ಮಾಡಿದ್ದಾರೆ.

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸರಸ್ವತಿಪುರಂ ನಲ್ಲಿರುವ ಶ್ರೀ ರಾಮಾನುಜ ಅಭ್ಯುದಯ ಸಹಕಾರ ಸಂಘದ ಸಭಾಂಗಣದಲ್ಲಿ ವಿಪ್ರ ಮುಖಂಡರು ಖಂಡನಾ ಸಭೆ ಹಮ್ಮಿಕೊಂಡಿದ್ದರು.

ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಜಾತಿಗಣತಿ ಅವೈಜ್ಞಾನಿಕವಾಗಿರುವ ವಿಚಾರಕ್ಕೆ ಸಂಬಂಧ ಪಟ್ಟಂತೆ 45ಲಕ್ಷವಿರುವ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಕೇವಲ 15ಲಕ್ಷ ನಮೂದಿಸಲಾಗಿದೆ ಎಂದು ಕೇಳಿಬರುತ್ತಿದ್ದು ಅದನ್ನು ವಿರೋಧಿಸಿ ಹಾಗೂ ಶಿವಮೊಗ್ಗ, ಬೀದರ್ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಜನಿವಾರ ತೊಟ್ಟ ಬ್ರಾಹ್ಮಣರಿಗೆ ಆದ ಅಪಮಾನ ಖಂಡಿಸಿ ವಿಪ್ರ ಮುಖಂಡರು ನಾಳೆ ಶನಿವಾರ ಬೆಳಗ್ಗೆ ಅಗ್ರಹಾರ ವೃತ್ತದಿಂದ ಮೆರವಣಿಗೆ ಮೂಲಕ ಕೃಷ್ಣರಾಜ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಜಿಲ್ಲಾ ಪ್ರತಿನಿಧಿ ಡಾ. ಲಕ್ಷ್ಮಿದೇವಿ ಅವರು ಮಾತನಾಡಿ ಶಿವಮೊಗ್ಗದಲ್ಲಿ ಜನಿವಾರಕ್ಕೆ ಅಪಮಾನ ಮಾಡಿರುವ ವಿಚಾರ ಸಮಾಜದಲ್ಲಿ ಅರ್ಚಕ ಪೌರೋಹಿತ್ಯ ಅಡುಗೆ ವೃತ್ತಿ ಮೇಲೆ ಅವಲಂಭಿತವಾಗಿರುವ ಬ್ರಾಹ್ಮಣರಿಗೆ ಮನೆಯಿಂದ ಹೊರಬಂದರೆ ಇನ್ನೇನಾದರೂ ತೊಂದರೆ ಕಾದಿದೆಯೇ ಎನ್ನುವ ಭಯ ಕಾಡುತ್ತಿದೆ, ಹಾಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಸಮಾಜದಲ್ಲಿ ಶಾಂತಿ ಕದಡುವ ದುಷ್ಕೃತ್ಯಕ್ಕೆ ಕಾರಣರಾಗುವ ಕಿಡಿಗೇಡಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕು ಎಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್ ಅವರು ಮಾತನಾಡಿ ರಾಜ್ಯಸರ್ಕಾರ ಹತ್ತುವರ್ಷದ ಹಿಂದೆ ಮಾಡಿರುವ ಜಾತಿಗಣತಿ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ಸಂವಿಧಾನದಲ್ಲಿ ಎಲ್ಲಾ ಧರ್ಮ, ಜನಾಂಗದ ಆಚರಣೆಗೂ ಮುಕ್ತ ಅವಕಾಶವಿದೆ. ಆದರೆ ಯಾರಿಗೂ ಅನ್ಯಾಯ ತೇಜೋವಧೆ ಮಾಡುವ ಹಕ್ಕಿಲ್ಲ, ಹಾಗಾಗಿ ಜನಿವಾರವನ್ನ ತುಂಡರಿಸಿರುವ ವಿಚಾರ ಕೋಟ್ಯಾಂಟರ ಬ್ರಾಹ್ಮಣ ಸಮುದಾಯದವರ ಭಾವನೆಗೆ ಧಕ್ಕೆ ಉಂಟಾಗಿದ್ದು ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಂಡು ಲೋಪ ಮಾಡಿರುವ ಸರ್ಕಾರಿ ನೌಕರರನ್ನ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಅವರು ಮಾತನಾಡಿ ಜಾತಿಗಣತಿ ಅವೈಜ್ಞಾನಿಕವಾಗಿದ್ದು ಬಹುತೇಖ ಮನೆಗಳಿಗೆ ಭೇಟಿಯೇ ನೀಡಿಲ್ಲ, 45ಲಕ್ಷಕ್ಕೂ ಹೆಚ್ಚಿರುವ ಬ್ರಾಹ್ಮಣ ಸಮುದಾಯವನ್ನ 15 ಲಕ್ಷವೆಂದು ತೋರಿಸುತ್ತಿರುವುದು ಇದರ ಹಿಂದೆ ಸಮುದಾಯವನ್ನ ತುಳಿಯುವ ಭಾರೀ ಷಡ್ಯಂತ್ರವಿದೆ ಎಂದು ದೂರಿದರು.

ಜನಿವಾರ ಅಪಮಾನ ಮಾಡಿರುವ ಧೋರಣೆ ಕೋಟ್ಯಾಂತರ ಬ್ರಾಹ್ಮಣರ ಭಾವನೆಗೆ ಧಕ್ಕೆ ಉಂಟಾಗಿದ್ದು ಇದನ್ನ ಖಂಡಿಸಿ ಏಪ್ರಿಲ್ 19ರ ಶನಿವಾರ ಬೆಳಗ್ಗೆ ಅಗ್ರಹಾರದಲ್ಲಿರುವ ಕೃಷ್ಣರಾಜ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಿದ್ದು ವಿಪ್ರ ಸಮುದಾಯದ ಮುಖಂಡರು ಭಾಗವಹಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ನಂ.ಶ್ರೀಕಂಠಕುಮಾರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾವಿ. ರಾಂ ಪ್ರಸಾದ್, ಎಂ.ಡಿ ಪಾರ್ಥಸಾರಥಿ, ರಾಮಾನುಜ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ರಾಜಗೋಪಾಲ್, ನಿವೃತ್ತ ತಹಶಿಲ್ದಾರ್ ಯತಿರಾಜ್, ಯೋಗನರಸಿಂಹ ಮುರಳಿ, ಸರಸ್ವತಿ ನಿಲಯ ಕಾರ್ಯದರ್ಶಿ ಮಹೇಶ್ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ ನಿಶಾಂತ್, ಜಯಸಿಂಹ, ಶ್ರೀಕಾಂತ್ ಕಶ್ಯಪ್, ಟಿ.ಎಸ್. ಅರುಣ್, ಶ್ರೀನಿವಾಸಪ್ರಸಾದ್, ವಿಜಯಕುಮಾರ್, ಪುಟ್ಟಸ್ವಾಮಿ, ಸುಚೀಂದ್ರ, ಚಕ್ರಪಾಣಿ ಮತ್ತಿತರರು ಪಾಲ್ಗೊಂಡಿದ್ದರು.