ಮೈಸೂರು: ನಿತ್ಯ ಮನೆ ಕೆಲಸ, ಕೃಷಿ ಕೆಲಸದಲ್ಲಿಯೇ ಸಂಪೂರ್ಣ ಸಮಯ ಕಳೆಯುತ್ತಿದ್ದ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸಿ ಮಕ್ಕಳಂತೆ ಸಂಭ್ರಮಿಸಿದರು

ಭುವನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪವಿತ್ರ.ಎಸ್ ಅವರು ಸಂತೋಷ ವ್ಯಕ್ತಪಡಿಸಿದರು.
ಪಿರಿಯಾಪಟ್ಟಣ ತಾಲ್ಲೂಕು ಭುವನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಶಾಲಾ ಆವರಣದಲ್ಲಿ ಆಯೋಜಿಸಿದ್ದ, ಮಹಿಳಾ ಗ್ರಾಮಸಭೆ ಹಾಗೂ ಕ್ರೀಡಾಕೂಟದಲ್ಲಿ ಮಹಿಳೆಯರು ಎಲ್ಲ ಜಂಜಡಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗಿಕೊಂಡು ಖುಷಿಪಟ್ಟರು.

ಭುವನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪವಿತ್ರ.ಎಸ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಗ್ರಾಮೀಣಪ್ರದೇಶದ ಮಹಿಳೆಯರು ಕುಟುಂಬದ ನಿರ್ವಹಣೆ ಹಾಗೂ ಕೃಷಿ ಕೆಲಸದಲ್ಲಿಯೇ ತಮ್ಮ ಬಹುಪಾಲು ಸಮಯ ಕಳೆಯುತ್ತಾರೆ, ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಪವಿತ್ರ ಬೇಸರ ವ್ಯಕ್ತಪಡಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯು ಮಹಿಳೆಯರ ಸಾಧನೆ ವಿಶೇಷವಾಗಿದೆ. ಪುರುಷರನ್ನು ಮೀರಿಸುವಂತೆ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರು ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ಹೊರಬರಲು ಈ ರೀತಿಯ ಕ್ರೀಡಾಕೂಟದಲ್ಲಿ ಹೆಚ್ಚು ಭಾಗವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವ-ಸಹಾಯ ಗುಂಪುಗಳನ್ನು ನಿರ್ಮಿಸಿಕೊಂಡಿದ್ದು ಅವುಗಳ ಮೂಲಕ ಒಟ್ಟಾಗಿ ಸೇರಿ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಐಇಸಿ ಸಂಯೋಜಕ ರವಿಕುಮಾರ್ ನರೇಗಾ ಯೋಜನೆಯಡಿ ದೊರೆಯುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಕುರಿತು ಹಾಗೂ ನರೇಗಾ ಸಹಾಯವಾಣಿ ಸಂಖ್ಯೆ 8277506000 ಬಗ್ಗೆ ಮಾಹಿತಿ ನೀಡಿದರು.

ಗುಂಡು ಎಸೆತ, ತಟ್ಟೆ ಎಸೆತ, ಲೆಮನ್ ಅಂಡ್ ಸ್ಪೂನ್, ಮ್ಯೂಸಿಕಲ್ ಚೇರ್, ರಂಗೋಲಿ, 100 ಮೀಟರ್ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು, ಪ್ರಾಥಮಿಕ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭ ಉಪಾಧ್ಯಕ್ಷರಾದ ಮಮತಾ, ಸದಸ್ಯರಾದ ದೀಪು, ಜೆಜೆಎಂ ಐಇಸಿ ಸಂಯೋಜಕಿ ಭಾಗ್ಯ ಹಾಗೂ ಶಾಲಾ ಶಿಕ್ಷಕರು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.