ಮೈಸೂರು: ಮೈಸೂರಿನ ವಿಮಾನ ನಿಲ್ದಾಣ ವಿಸ್ತರಣೆಗೆ ಈಗಾಗಲೇ 230 ಎಕರೆ ಭೂ ಸ್ವಾಧೀನ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾದೇವಪ್ಪ ಅವರು,ಉಳಿದ ಇನ್ನು 10 ಎಕರೆ ಶೀಘ್ರದಲ್ಲೇ ಭೂಸ್ವಾಧೀನ ಮಾಡಲಾಗುತ್ತದೆ ಎಂದು ಹೇಳಿದರು.
ಮೈಸೂರು ಊಟಿ ಹೈವೆ ರಸ್ತೆ ಸ್ಥಳಾಂತರಕ್ಕೂ ಸುಮಾರು 60 ಎಕರೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ವಿಮಾನ ನಿಲ್ದಾಣ ವಿಸ್ತರಣೆ ವೇಳೆ ಮೂರು ನೀರಾವರಿ ಚಾನಲ್ ನಿಲ್ದಾಣದ ಒಳಗೆ ಸೇರ್ಪಡೆ ಆಗುತ್ತದೆ. ಹಾಗಾಗಿ ಚಾನೆಲ್ ಗಳಿಗೆ ಬಾಕ್ಸ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರದಿಂದಲೇ 100 ಕೋಟಿ ಮೀಸಲಿಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸುಮಾರು 800 ಎಕರೆ ಜಾಗ ಮೀಸಲಿರಿಸಿದ್ದು ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ರೈತರಿಗೆ ಸೂಕ್ತ ಪರಿಹಾರ ಕೊಟ್ಟು ಭೂಮಿ ಖರೀದಿ ಮಾಡಲಾಗುತ್ತದೆ.ತಕರಾರು ಮಾಡಿ ಕೋರ್ಟ್ ಮೊರೆ ಹೋಗುವವರ ಮನವೊಲಿ ಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಡೀಮ್ಡ್ ಫಾರೆಸ್ಟ್ ಅಡಿ ಕೆಲವು ರೈತರ ಜಮೀನುಗಳನ್ನ ಅರಣ್ಯ ಇಲಾಖೆ ವಶಪಡಿಸಿಕೊಂಡು ರೈತರಿಗೆ ತೊಂದರೆ ಕೊಡುತ್ತಿದೆ. ಮರು ಸರ್ವೆ ಮಾಡಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಮಹದೇವಪ್ಪ ತಿಳಿಸಿದರು.