ಮೈಸೂರು,ನ.2: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗಾಗಿ ಭೂ ಸ್ವಾಧೀನ ಕೆಲಸ ಚುರುಕುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ; ಹೆಚ್.ಸಿ ಮಹದೇವಪ್ಪ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, 240 ಎಕರೆ ಭೂ ಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. 40ಎಕರೆ ಭೂಮಿಗೆ ಪರಿಹಾರ ನೀಡಲು ಶೀಘ್ರವಾಗಿ ಕ್ರಮವಹಿಸಿ ಎಂದು ಹೇಳಿದರು.
ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಜಿಲ್ಲೆಯಲ್ಲಿ 393.85 ಕೋಟಿ ರೂ ವೆಚ್ಚದಲ್ಲಿ 46 ಕಿಮೀ, 12 ರಸ್ತೆಗಳನ್ನು ಆಯ್ಕೆ ಮಾಡಲಾಗಿದೆ. ವೈಟ್ ಟಾಪಿಂಗ್ ಮಾಡುವುದರಿಂದ ರಸ್ತೆಯು ಹೆಚ್ಚು ವರ್ಷಗಳ ಕಾಲ ಬಳಕೆಗೆ ಬರಲಿದೆ ಎಂದು ತಿಳಿಸಿದರು.
ಶಾಸಕರಾದ ತನ್ವೀರ್ ಸೇಠ್, ಮಾತನಾಡಿ ವಿಮಾನ ನಿಲ್ದಾಣ ವಿಸ್ತರಣೆ ಮಾಡುವುದರಿಂದ ಮೈಸೂರು ನಗರ ಅಭಿವೃದ್ಧಿಯಾಗಲಿದೆ. ಐ.ಟಿ ಕಂಪನಿಗಳ ಬೆಳವಣಿಗೆ ಹಾಗೂ ಕಾರ್ಗೋ ಸಿಸ್ಟಂ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಫ್ಲೈ ಓವರ್, ಟನಲ್ ಗಳ ನಿರ್ಮಾಣ ಹೆಚ್ಚಳವಾಗುತ್ತಿದೆ ಇದರಿಂದ ನಗರದ ಸೌಂದರ್ಯ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಪರ್ಯಾಯ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಶಾಸಕರಾದ ಜಿ.ಟಿ.ದೇವೇಗೌಡರು ಮಾತನಾಡಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ರಸ್ತೆಗಳು ದುರಸ್ತಿಪಡಿಸಬೇಕಿದೆ,ತಕ್ಷಣ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಕೆ ಹರೀಶ್ ಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

