ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಸರ್ಕಾರ ನೇರ ಕಾರಣ:ಅಶೋಕ್

Spread the love

ಬೆಂಗಳೂರು: ಕಾನೂನು ತಿದ್ದುಪಡಿಯಿಂದ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುವುದಿಲ್ಲ ಎಂದು ಕಳೆದ ಮಾರ್ಚ್ ತಿಂಗಳಲ್ಲೇ ಸದನದಲ್ಲಿ ನಾನು ಹೇಳಿದ್ದ ಮಾತು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರತಿಪಕ್ಷದ ನಾಯಕ ಅಶೋಕ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರು ರೈತನ ಮನೆಗೆ ಬೀಗ ಜಡಿದು ಜಪ್ತಿ ಮಾಡಿರುವ ಘಟನೆ ನಡೆದಿದ್ದು, ಮೈಕ್ರೋ ಫೈನಾನ್ಸ್ ಹಾವಳಿಯಿಂದ ರೈತರು, ಕೃಷಿ ಕಾರ್ಮಿಕರು, ಬಡವರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಕಾನೂನು ತಿದ್ದುಪಡಿಯಿಂದ ಈ ಹಾವಳಿ ನಿಲ್ಲುವುದಿಲ್ಲ, ನಿಗಮ ಮಂಡಳಿಗಳಿಗೆ ಅನುದಾನ ನೀಡಿ ಅದರ ಮೂಲಕ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಾದರೆ ಮಾತ್ರ ಈ ಹಾವಳಿ ನಿಲ್ಲುತ್ತದೆ ಎಂದು ಸದನದಲ್ಲಿ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೆ,ಆದರೂ ಯಾವ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿರುವ ಎಲ್ಲ ಪ್ರಕರಣಗಳಿಗೂ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಅಶೋಕ್ ದೂರಿದ್ದಾರೆ.