ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ನಂತರವೂ ಸಹ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮುಂದುವರಿದಿದೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫೈನಾನ್ಸ್ ಕಂಪನಿಗಳ ಹಾವಳಿಗಳಿಂದ ತತ್ತರಿಸಿರುವ ರೈತರ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತರುಗಳು, ಮಹಿಳೆಯರು ಆಮ್ ಆದ್ಮಿ ಪಕ್ಷದ ಮುಖಂಡರ ಬಳಿ ತಮ್ಮ ಸಮಸ್ಯೆಗಳನ್ನುಅವಲತ್ತುಕೊಂಡರು.
ಅವರೆಲ್ಲರ ಸಮಸ್ಯೆ ಆಲಿಸಿದ ಸೀತಾರಾಮ್ ಗುಂಡಪ್ಪ ಮಾತನಾಡಿದರು.
ಮುಖ್ಯಮಂತ್ರಿಗಳಿಗೆ ತನ್ನ ಮಾಂಗಲ್ಯ ಸೂತ್ರವನ್ನು ಕಳುಹಿಸಿದ್ದ ರೈತ ಮಹಿಳೆ ಶೈಲಮ್ಮ ಹಾದರಹಳ್ಳಿ ಮಾತನಾಡಿ, ಇನ್ನೂ ಸಹ ಧರ್ಮಸ್ಥಳ ಸಹಕಾರಿ ಸಂಘ, ಮುತ್ತೂಟ್ ಫೈನಾನ್ಸ್, ಬೆಲ್ ಸ್ಟಾರ್, ಬಜಾಜ್ ಫೈನಾನ್ಸ್ ಇನ್ನಿತರ ಕಂಪನಿಗಳು ಪ್ರತಿ ದಿವ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ನೋಟಿಸ್ ನೀಡುವ ಮೂಲಕ ಒತ್ತಡ ಹಾಗೂ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಮುಖ್ಯಮಂತ್ರಿಗಳು, ಗೃಹ ಸಚಿವರು ಇತ್ತ ಕಡೆ ಗಮನಹರಿಸಿ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡಿ ಈ ದುರುಳ ಫೈನಾನ್ಸ್ ಕಂಪನಿಗಳ ಮಾಲೀಕರುಗಳ ವಿರುದ್ಧ ಕೇಸನ್ನು ದಾಖಲಿಸಿ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೀತಾರಾಮ ಗುಂಡಪ್ಪ ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷವು ನೊಂದ ಈ ರೈತರ ಪರ ಹಗಲಿರುಳು ಇರುತ್ತೇವೆ ಹಾಗೂ ಯಾವುದೇ ಕಾರಣಕ್ಕೂ ಯಾವ ಒತ್ತಡಕ್ಕೂ ಬೆದರಿಕೆಗಳಿಗೂ ಮಣಿಯಬಾರದು ಹಾಗೂ ಆತ್ಮಹತ್ಯೆಯ ದಾರಿಗೆ ಹೋಗಬಾರದೆಂದು ಮನವರಿಕೆ ಮಾಡಿದರು.

ಸಭೆಯಲ್ಲಿ ರಾಜ್ಯ ಉತ್ತರಭಾಗದ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗೆ ಗೌಡರ, ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕಬ್ಬಾರ್, ಎಂ, ಎನ್, ನಾಯಕ್, ರಾಜು ಅಂಗಡಿ, ಮಂಜುನಾಥ್ ಸಂಬೋಜಿ ಇನ್ನಿತರ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
