ಹಲಗೂರು: ಹಲಗೂರು ಸಮೀಪದ ಮುತ್ತತ್ತಿಯ ಕಾವೇರಿ ನದಿಯ ದಡದಲ್ಲಿರುವ ಮುತ್ತತ್ತಿರಾಯ ದೇವರ ಸನ್ನಿಧಿಯಲ್ಲಿ ಆಗಸ್ಟ್ 19ರಿಂದ 21ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.
19ರಂದು ಬೆಳಿಗ್ಗೆ ಪದ್ದಾರೆಯಲ್ಲಿ ಉಪವಾಸ, ದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ ಹಾಲರವಿ ಸೇವೆ ಮತ್ತು ಉತ್ಸವ ನಡೆಯಲಿವೆ.
20ರಂದು ದೊಡ್ಡ ಮುತ್ತತ್ತಿಯಲ್ಲಿ ಉಪವಾಸ, ದೇವಾಲಯ, ರಥ ಮತ್ತು ದೇವರಿಗೆ ಹೂವಿನ ಅಲಂಕಾರ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಯರಹಳ್ಳಿ ಪುಟ್ಟಸ್ವಾಮಿ ಮತ್ತು ಶ್ರೀನಿವಾಸ್ ತಂಡದವರಿಂದ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.
21ರಂದು ಹಾಲರವಿ ಸೇವೆ ಮತ್ತು ಬೆಳಿಗ್ಗೆ 10ಕ್ಕೆ ಮುತ್ತತ್ತಿರಾಯ ರಥೋತ್ಸವ, ಮಧ್ಯಾಹ್ನ 3ಕ್ಕೆ ಏಳಗಳ್ಳಿ ಮುತ್ತೇಗೌಡರಿಂದ ಹಾಲರವಿ ಮತ್ತು ತಮಟೆ ಕಲಾವಿದ ಕುಂತೂರು ಕುಮಾರ್ ಕಲಾ ತಂಡದಿಂದ ವೀರಗಾಸೆ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ ಪೂಜಾ ಕುಣಿತ ಕಾರ್ಯಕ್ರಮ ನಡೆಯಲಿದೆ.
ಆದಿ ಜಾಂಬವ ಜನಾಂಗದವರಿಂದ ಹಾಲರವಿ ಮತ್ತು ಕಾಯಿ ಒಡೆಯುವ ಸೇವೆ, ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಉತ್ಸವ, ರಾತ್ರಿ 7ಕ್ಕೆ ಪಲ್ಲಕ್ಕಿ ಉತ್ಸವ ನೆರವೇರಲಿದೆ.
22ರಂದು ಉತ್ಸವಕ್ಕೆ ತೆರೆ ಬೀಳಲಿದೆ.