ಮುರ್ಷಿದಾಬಾದ್‌ನಲ್ಲಿ ನಡೆದ ಕೋಮು ಹಿಂಸಾಚಾರ ಪೂರ್ವಯೋಜಿತ:ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರವು ಪೂರ್ವಯೋಜಿತ,ಗಡಿಯಲ್ಲಿ ಅಕ್ರಮವಾಗಿ ಒಳನುಸುಳಲು ಸಹಾಯ ಮಾಡುವ ಸಲುವಾಗಿ ಬಿಎಸ್‌ಎಫ್ ಮತ್ತು ಬಿಜೆಪಿಯ ಒಂದು ಭಾಗ ಉದ್ವಿಗ್ನತೆ ಹೆಚ್ಚಿಸುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬುಧವಾರ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕ್ಫ್ (ತಿದ್ದುಪಡಿ) ಕಾಯ್ದೆಯು ದೇಶವನ್ನು ವಿಭಜಿಸುತ್ತದೆ. ಹೀಗಾಗಿ ಇದನ್ನು ಜಾರಿಗೆ ತರದಂತೆ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ನಿಯಂತ್ರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.

ಅಮಿತ್ ಶಾ ಅವರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ರಾಷ್ಟ್ರಕ್ಕೆ ಹೆಚ್ಚು ಹಾನಿ ಮಾಡಿದ್ದಾರೆ ಎಂದು ಇದೇ ವೇಳೆ ಮಮತಾ ಆರೋಪಿಸಿದರು.

ಬಂಗಾಳವು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್‌ನೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ. ಇವೆರಡೂ ಪಶ್ಚಿಮ ಬಂಗಾಳದಲ್ಲಿ ಅಶಾಂತಿಗೆ ಕಾರಣವಾಗಿವೆ. ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಬಿಎಸ್‌ಎಫ್ ನ ಒಂದು ವಿಭಾಗ ಮತ್ತು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಲವು ಕೇಂದ್ರದ ಸಂಸ್ಥೆಗಳು ಭಾಗಿಯಾಗಿವೆ ಎಂದು ದೂರಿದರು.

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ ಅವರು, ಬಿಎಸ್‌ಎಫ್ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಬಿಎಸ್‌ಎಫ್‌ನ ಕ್ರಮಗಳ ಬಗ್ಗೆ ತನಿಖೆ ಆರಂಭಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಮುರ್ಷಿದಾಬಾದ್ ಗಲಭೆಯಲ್ಲಿ ಗಡಿಯಾಚೆಗಿನ ಅಂಶಗಳ ಪಾತ್ರವಿದೆ ಎನ್ನುವ ವಿಚಾರ ನನಗೆ ತಿಳಿಯಿತು. ಗಡಿಯನ್ನು ಕಾಯುವುದು ಬಿಎಸ್‌ಎಫ್‌ನ ಪಾತ್ರವಲ್ಲವೇ, ರಾಜ್ಯ ಸರ್ಕಾರವು ಅಂತರರಾಷ್ಟ್ರೀಯ ಗಡಿಯನ್ನು ಕಾಯುವುದಿಲ್ಲ. ಕೇಂದ್ರ ಸರ್ಕಾರವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂಸಾಚಾರದ ಸಮಯದಲ್ಲಿ ಕಲ್ಲು ತೂರಲು ಮತ್ತು ಅವ್ಯವಸ್ಥೆ ಸೃಷ್ಟಿಸಲು ಗಡಿ ಬಳಿ ವಾಸಿಸುವ ಸ್ಥಳೀಯ ಯುವಕರಿಗೆ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಹಣ ನೀಡಿರಬಹುದು. ಆ ಹಣವನ್ನು ಯಾರು ಪಡೆದರು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಪಕ್ಷಗಳು ಆರೋಪಿಸಿದಂತೆ ವಕ್ಫ್ ಸಂಬಂಧಿತ ಹಿಂಸಾಚಾರದ ಹಿಂದೆ ಟಿಎಂಸಿ ಕೈವಾಡವಿದ್ದರೆ, ನಮ್ಮ ಪಕ್ಷದ ನಾಯಕರ ಮನೆಗಳ ಮೇಲೆ ಏಕೆ ದಾಳಿ ಮಾಡಲಾಯಿತು? ರಾಮನವಮಿಯ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಬಿಜೆಪಿ ನಡೆಸಿದ್ದ ಪ್ರಯತ್ನಗಳು ವಿಫಲವಾಗಿವೆ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ‌ಹೇಳಿದರು.

ಪ್ರತಿಯೊಂದು ಸಮುದಾಯದಲ್ಲೂ ದೇಶದ್ರೋಹಿಗಳಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ. ಬಿಜೆಪಿ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರೆ, ನೀವು ಎದ್ದು ನಿಲ್ಲಬೇಕು. ಇಮಾಮ್ ಸಾಹಬ್ ಕೂಡ ಒಂದು ಪಾತ್ರವನ್ನು ವಹಿಸಬೇಕು. ನಮಗೆ ಶಾಂತಿ ಬೇಕು. ನಾವು ಇಲ್ಲಿರುವವರೆಗೂ, ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಗುಡುಗಿದರು.