ತುಮಕೂರು: ನನ್ನ ಕೊಲೆಗೆ 70 ಲಕ್ಷ ರೂ ಸುಪಾರಿ ಕೊಡಲಾಗಿದೆ ಎಂದು ಆರೋಪಿಸಿ ಸಚಿವ ಕೆ.ಎನ್ ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ತುಮಕೂರು ಎಸ್ಪಿ ಕಚೇರಿಗೆ ತೆರಳಿದ ರಾಜೇಂದ್ರ ರಾಜಣ್ಣ ಅವರು ಎಸ್ಪಿ ಅಶೋಕ್ ಕುಮಾರ್ ಅವರಿಗೆ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ನೀಡಿದ್ದಾರೆ. ತುಮಕೂರಿನ ಕ್ಯಾತ್ಸಂದದ ರಜತಾದ್ರಿ ನಿವಾಸದಲ್ಲಿ ಕಳೆದ ನವೆಂಬರ್‌ನಲ್ಲಿ ನನ್ನ ಹತ್ಯೆಗೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ. ಅದರಲ್ಲಿ 5 ಲಕ್ಷ ಮುಂಗಡ ಪಾವತಿ ಮಾಡಿದ್ದಾರೆ. ಸೋಮ ಮತ್ತು ಭರತ್ ಅನ್ನೋರು ಇದರಲ್ಲಿದ್ದಾರೆ ಎಂದು ಹೇಳಿದರು.
ನನ್ನ ವಾಹನಕ್ಕೆ ಜಿಪಿಎಸ್ (GPS) ಅಳವಡಿಸಿ ಚಲನ ವಲನ ತಿಳಿಯಲು ಪ್ರಯತ್ನ ಪಟ್ಟಿದ್ದರು. ಹೀಗಾಗಿ ನನಗೆ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದೇನೆ. ಸುಪಾರಿ ಟೀಂ ನಲ್ಲಿ 20 ಜನ ಇದ್ದಾರೆ. 18 ನಿಮಿಷದ ಆಡಿಯೋ ಇದೆ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.
ಡಿಜಿ ಅವರ ಸಲಹೆ ಮೇರೆಗೆ ಎಸ್ಪಿಗೆ ದೂರು ನೀಡಿದ್ದೇನೆ,ಹನಿಟ್ರ‍್ಯಾಪ್ ವಿಚಾರ ಎಲ್ಲೂ ಪ್ರಸ್ತಾಪ ಮಾಡಿಲ್ಲ,ನನಗೆ ಅಪರಿಚಿತರಿಂದ ಫೋನ್ ಕಾಲ್, ಮೆಸೆಜ್, ವೀಡಿಯೋ ಕಾಲ್ ಬರುತಿತ್ತು ಅಂತಾ ಅಷ್ಟೇ ಹೇಳಿದ್ದೆ. ಈಗ ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದರ ಬಗ್ಗೆ ದೂರು ನೀಡಿದ್ದೇನೆ, ಎಫ್‌ಐಆರ್ ಮಾಡುವಂತೆ ಕೇಳಿಕೊಂಡಿದ್ದೇನೆ. ಕ್ಯಾತಸಂದ್ರ ಠಾಣೆಯಲ್ಲಿ ಎಫ್‌ಐಆರ್ ಮಾಡುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ನನ್ನ ಮೇಲೆ ಯಾರಿಗೂ ದ್ವೇಷ ಇಲ್ಲ. ನಾನೇನು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಯಾಕೆ ಸುಪಾರಿ ಕೊಟ್ಟರು ಗೊತ್ತಿಲ್ಲ, ಅದನ್ನು ತನಿಖೆ ಮಾಡುವಂತೆ ಹೇಳಿದ್ದೇನೆ. ಸೋಮ ಮತ್ತು ಭರತ್ ಅನ್ನುವವರ ಹೆಸರು ಆಡಿಯೋದಲ್ಲಿ ಇದೆ. ಅವರು ಯಾರು ಅಂತಾ ಗೊತ್ತಿಲ್ಲ. ಒಬ್ಬ ಲೇಡಿ ಮತ್ತು ಹುಡುಗ 18 ನಿಮಿಷ ಆಡಿಯೋದಲ್ಲಿ ಮಾತನಾಡುತ್ತಾರೆ. ಮಗಳ ಬರ್ತ್‌ಡೇ ಹಿಂದಿನ ದಿನ ಹತ್ಯೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು. ಶಾಮಿಯಾನ ಮಾಲೀಕರು ಹೆಸರು ನಾನು ಹೇಳಲ್ಲ. ಮಾಧ್ಯಮದವರಿಂದ ಅವರಿಗೆ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ನಾನು ಅವರ ಹೆಸರು ಹೇಳುವುದಿಲ್ಲ ಎಂದು ರಾಜೇಂದ್ರ ರಾಜಣ್ಣ ತಿಳಿಸಿದರು.
ಇದೀಗ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.