ಮೈಸೂರು: ಪತಿಯನ್ನ ಮುಗಿಸಲು ಪತ್ನಿಯೇ ಸ್ಕೆಚ್ ಹಾಕಿ ಸಿಕ್ಕಿಬಿದ್ದ ಪ್ರಸಂಗ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕೊಲೆಯಾಗುವುದು ತಪ್ಪಿದೆ,ಈಗ ಕತರ್ನಾಕ್ ಪತ್ನಿ ಜೈಲುಪಾಲಾಗಿದ್ದಾಳೆ.
ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದುಕೊಂಡ ಪತ್ನಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಳು.ಗ್ರಹಚಾರ ಸರಿ ಇರಲಿಲ್ಲ,ಸಿಕ್ಕಿಬಿದ್ದಿದ್ದಾಳೆ.
ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ,ಆಕೆಯ ಸಹೋದರ ಸಂಜಯ್, ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಡ್ರಾಗರ್ ನಿಂದ ಇರಿದ ಕಾರಣ ಸಂಗೀತಾಳ ಪತಿ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೈಬರ್ ಡೋರ್ ಗಳನ್ನ ಫಿಟ್ ಮಾಡುವ ವೃತ್ತಿ ನಡೆಸುವ ರಾಜೇಂದ್ರ ಅವರನ್ನ ಹತ್ಯೆ ಮಾಡಲು ಪತ್ನಿ ಸಂಚು ಮಾಡಿದ್ದಳು.
ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಕಲಹದ ಹಿನ್ನಲೆ ಆಕೆ ಕೋಪಗೊಂಡಿದ್ದಳು.ಅಕ್ಟೋಬರ್ 25 ರಂದು ರಾಜೇಂದ್ರ ಅವರು ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್ ನಲ್ಲಿ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದರು.
ಆಗ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಸ್ಕೂಟರ್ ಗೆ ಅಡ್ಡವಾಗಿ ನಿಂತಿದೆ.ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿದ್ದಾನೆ.ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ವ್ಯಕ್ತಿ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ.ಇದೇ ಸಂದರ್ಭದಲ್ಲಿ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ. ಆಗ ವ್ಯಕ್ತಿ ಡ್ರ್ಯಾಗರ್ ನಿಂದ ರಾಜೇಂದ್ರ ಅವರಿಗೆ ತಿವಿದಿದ್ದಾನೆ.
ಇದೇ ವೇಳೆ ವಾಹನವೊಂದು ಬಂದಿದೆ ಅದರಲ್ಲಿ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ರಾಜೇಂದ್ರ ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಕ್ಷಣ ಅಲರ್ಟ್ ಆದ ನಂಜನಗೂಡು ಪೊಲೀಸರು ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್,ಡಿವೈಎಸ್ಪಿ ರಘು ರವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ರವೀಂದ್ರ,ಪಿಎಸ್ಸೈಗಳಾದ ಕೃಷ್ಣಕಾಂತ ಕೋಳಿ ಮಂಜುನಾಥ್, ಎಎಸ್ಸೈ ದೇವರಾಜಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದರು.
ಘಟನೆ ನಡೆದ ಸ್ಥಳ,ಸಿಸಿ ಕ್ಯಾಮರಾ ನೆರವು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತೆನಿಖೆ ಆರಂಭಿಸಿದಾಗ ಪತ್ನಿ ಸಂಗೀತಾಳ ಕತರ್ನಾಕ್ ಪ್ಲ್ಯಾನ್ ಬಯಲಾಗಿದೆ.
ವಿವರ: ಕಾರನ್ನ ಬಾಡಿಗೆ ಪಡೆದ ಸಂಗೀತಾಳ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕನ ನೆರವಿನಿಂದ ಹತ್ಯೆಗೆ ಸಂಚು ರೂಪಿಸಿದ್ದಾರೆ.
ಸಂಜೆ 7.30 ರ ಸಮಯದಲ್ಲಿ ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದಾರೆ.ಸಂಗೀತಾ ಕೂಡಾ ಮಹಾನ್ ನಟನೆ ಮಾಡಿದ್ದಾಳೆ.
ಡ್ರಾಗರ್ ನಿಂದ ಚುಚ್ಚಿ ರಾಜೇಂದ್ರ ರನ್ನ ಮುಗಿಸುವ ಸ್ಕೆಚ್ ನಡೆದಿತ್ತು,ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಕೊಲೆ ಮಿಸ್ ಆಗಿದೆ.
ಪೊಲೀಸರು ಸಂಗೀತಾಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ.ಪತಿಯನ್ನೇ ಮುಗಿಸಲು ಯತ್ನಿಸಿದ ಕತರ್ನಾಕ್ ಪತ್ನಿ ಸಂಗೀತಾ ಸಹೋದರ ಜೊತೆ ಕಂಬಿ ಎಣಿಸುವಂತಾಗಿದೆ.

