ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ:ಚೆಲುವರಾಜು ವಿರೋಧ

ಹುಣಸೂರು: ಹುಣಸೂರು ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸದೇ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ ಮಾಡ ಹೊರಟಿರುವುದು ಸರಿಯಲ್ಲ, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ತಾ.ಅಧ್ಯಕ್ಷ ಚೆಲುವರಾಜು ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಹುಣಸೂರು‌ ನಗರಸಭಾ ಆಯುಕ್ತರಿಗೆ ಚೆಲುವರಾಜು ಪತ್ರ ಬರೆದಿದ್ದಾರೆ.
ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ. ರಸ್ತೆ ನಿರ್ಮಾಣ ಮಾಡಲು ಟೆಂಡರ್ ಆಗಿರುವುದು ಸರಿಯಷ್ಟೆ ಆದರೆ ನಗರಸಭಾ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡುವಂತಿಲ್ಲ, ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಕ್ರೀಡಾ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಮೀಸಲಾಗಿರುವ ಈ ಆಟದ ಮೈದಾನದಲ್ಲಿ ವಿ.ಐ.ಪಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಿಲ್ ಮಾಡಿಸುವುದು ನಗರಸಭಾ ಅಧಿಕಾರಿಗಳ ದುರುದ್ದೇಶವಾಗಿದೆ, ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚಿಸದೇ ಇರುವುದರಿಂದ ಹುಣಸೂರಿನ ಜನತೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.

ಇದನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಬೇಕಾದ ನಗರಸಭೆ ಅಧಿಕಾರಿಗಳು ಅನಾವಶ್ಯಕವಾಗಿ ಮುನೇಶ್ವರ ಕಾವಲ್ ಆಟದ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಸರಿಯಲ್ಲ.
ನಗರಸಭಾ ಮೈದಾನವನ್ನು ಆಟದ ಮೈದಾನವಾಗಿ ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಆದ್ದರಿಂದ ಕೂಡಲೇ ವಿ.ಐ.ಪಿ. ರಸ್ತೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆ ಆದೇಶದ ಕಾಪಿ, ಕಾಮಗಾರಿಗಾಗಿ ಮಾಡಲಾಗಿರುವ ಅಗ್ರಿಮೆಂಟ್ ಪ್ರತಿ ಹಾಗೂ ಕಾಮಗಾರಿಯ ಅಂದಾಜು ಪಟ್ಟಿಯ ಸಂಪೂರ್ಣ ಮಾಹಿತಿ ದಾಖಲೆಗಳನ್ನು ನೀಡಬೇಕೆಂದು ಚೆಲುವರಾಜು ಕೋರಿದ್ದಾರೆ.

ಮಾಹಿತಿಗಳನ್ನು ಕೊಡಲು ತಪ್ಪಿದರೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಟೆಂಡರ್ ಪಡೆದಿರುವ ಗುತ್ತಿಗೆದಾರನಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಬಿಲ್ ಪಾಸ್ ಮಾಡಬಾರದು ಎಂದು ಪರಿಸರ ಇಂಜಿನಿಯರ್ ಗೂ ಅವರು ಮನವಿ ಮಾಡಿದ್ದಾರೆ.

ಈ ಕಾಮಗಾರಿಯಲ್ಲಿ ಜಲ್ಲಿ ಹಾಕದೆ ಕಾಂಕ್ರಿಟ್ ಹಾಕುತ್ತಿದ್ದು ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದೆ. ಇಡೀ ಹುಣಸೂರಿನ ಜನ ವಿರೋಧಿಸಿದ್ದಾರೆ, ಇದನ್ನು ವಿಚಾರಿಸಲು ಹೋದ ನಮ್ಮ ಮೇಲೆಯೇ ಗುತ್ತಿಗೆದಾರ ಬೆದರಿಕೆ ಹಾಕಿ ತಳ್ಳಾಡಿದ್ದಾರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು
ಚೆಲುವರಾಜು ತಿಳಿಸಿದ್ದಾರೆ