ಮುಮ್ಮಡಿ ಕೃಷ್ಣ ರಾಜ ಒಡೆಯರ್ ಜಯಂತಿ:ಮಕ್ಕಳಿಗೆ ಪುಸ್ತಕ, ಲೇಖನಿ ವಿತರಣೆ

Spread the love

ಮೈಸೂರು: ಹಲವು ಪರಿವರ್ತನೆಗಳಿಗೆ ನಾಂದಿ ಹಾಡಿದ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಜಯಂತಿ ಪ್ರಯುಕ್ತ ಅಪೂರ್ವ ಸ್ನೇಹ ಬಳಗದ ವತಿಯಿಂದ ಮಕ್ಕಳಿಗೆ ಪುಸ್ತಕ,
ಲೇಖನಿ ಸಾಮಗ್ರಿ ನೀಡಲಾಯಿತು.

ಮೈಸೂರಿನ ಆರ್‌ಟಿಒ ವೃತದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡುವ ಮೂಲಕ
ಮುಮ್ಮಡಿ ಕೃಷ್ಣ ರಾಜ ಒಡೆಯರ್
ಜಯಂತ್ಯೋತ್ಸವವನ್ನು ಆಚರಿಸಲಾಯಿತು.

ಈ ವೇಳೆ ಮುಡಾ ಮಾಜಿ ಸದಸ್ಯರಾದ ಲಕ್ಷ್ಮೀದೇವಿ ಮಾತನಾಡಿ,ಮೈಸೂರು ಸಂಸ್ಥಾನದ ರಾಜ್ಯಭಾರವನ್ನು ಸಮರ್ಥವಾಗಿ ನಡೆಸಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಎಂದು ತಿಳಿಸಿದರು.

ಅತ್ಯಂತ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಅವರು ಮಹಾರಾಜರಾಗಿದ್ದರು.1794ರಲ್ಲಿ ಶ್ರೀರಂಗಪಟ್ಟಣದಲ್ಲಿ ಜನಿಸಿದ ಅವರು 1799ರಲ್ಲಿ ಪಟ್ಟಾಧಿಕಾರವನ್ನು ಪಡೆದರು, ಟಿಪ್ಪು ಮರಣಾನಂತರ ಮೈಸೂರು ಸಂಸ್ಥಾನದ ಆಡಳಿತವನ್ನು ಮೈಸೂರು ರಾಜರಿಗೆ ನೀಡಬೇಕೆಂಬ ಇಚ್ಛೆಯಿಂದ ಬ್ರಿಟಿಷರು ಕೊಟ್ಟ ಸಂದರ್ಭದಲ್ಲಿ ಅವರಿಗೆ ಐದು ವರ್ಷಗಳು. ಅವರ ತಾಯಿ ಲಕ್ಷ್ಮಮ್ಮಣ್ಣಿ ಮತ್ತು ದಿವಾನ್ ಪೂರ್ಣಯ್ಯನವರ ಸಹಕಾರದೊಂದಿಗೆ ಅವರು ತಮ್ಮ ರಾಜ್ಯಭಾರವನ್ನು ಮುಂದುವರಿಸಿದರು.

ಆನಂತರ ವಿದ್ಯಾಭ್ಯಾಸ ಮಾಡಿ ತಾಯಿಯ ಮರಣಾನಂತರ ಅಧಿಕಾರ ಮುಂದುವರಿಸಿ,ಇದ್ದಷ್ಟು ದಿನಗಳೂ ಕೂಡ ಸಮರ್ಥವಾಗಿ, ಸಾಹಿತ್ಯಾತ್ಮಕವಾಗಿ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಆಡಳಿತವನ್ನು ನೀಡಿದವರು ಮುಮ್ಮಡಿಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಜಗದೀಶ್, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು,ಶಿಕ್ಷಕರಾದ ನೀಲ, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಪುರುಷೋತ್ತಮ್,ಜತ್ತಿ ಪ್ರಸಾದ್, ಸುಚೇಂದ್ರ, ಶಾಲೆಯ ಮುಖ್ಯ ಶಿಕ್ಷಕಿ ವಳ್ಳಿ, ರಾಜಕುಮಾರಿ ಮತ್ತಿತರರು ಹಾಜರಿದ್ದರು.