ಹಂಪಿ ಕನ್ನಡ ವಿವಿ ಉಳಿವಿಗೆ ಕೂಡಲೇ 23 ಕೋಟಿ ಬಿಡುಗಡೆಗೆ ಮು ಮ ಚಂದ್ರು ಆಗ್ರಹ

Spread the love

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಕೂಡಲೇ 23 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ

ಕಳೆದ 32 ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗವಾದ ಐತಿಹಾಸಿಕ ಸ್ಥಳ ಹಂಪಿಯಲ್ಲಿ ಕನ್ನಡ ನಾಡು, ನುಡಿ ,ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನೆಗೆ ಮೀಸಲಾಗಿ ಈ ಹಂಪಿ ವಿಶ್ವವಿದ್ಯಾಲ ಸ್ಥಾಪನೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಸೂಕ್ತ ಅನುದಾನವಿಲ್ಲದೆ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಲು, ಇವುಗಳನ್ನು ಪ್ರಕಟಿಸಲು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳ ವೇತನ ಹಾಗೂ ದಿನನಿತ್ಯದ ನಿರ್ವಹಣಾ ಕಾರ್ಯಗಳಿಗೆ ತೊಡಕುಂಟಾಗಿದೆ ಹಾಗಾಗಿ ಕೂಡಲೇ 23 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನವನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪಾದರ್ಪಣೆ ಮಾಡಿ ಇಂದು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಕನ್ನಡದ ಕೈಂಕರ್ಯಕ್ಕಾಗಿಯೇ ಮೀಸಲಿಟ್ಟಿರುವ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳು ಪತ್ರ ಬರೆದು ನಂತರ ಸ್ವತಹ ಮುಖ್ಯಮಂತ್ರಿಗಳೇ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದ್ದರೂ ಸಹ ಆರ್ಥಿಕ ಇಲಾಖೆಯಿಂದ ಐದು ತಿಂಗಳಾದರೂ ಅನುದಾನ ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಪತ್ರದಲ್ಲಿ ಚಂದ್ರು ಹೇಳಿದ್ದಾರೆ.

ಇದರಲ್ಲಿ ಎಸ್ಸಿ ಎಸ್ ಪಿ / ಟಿ ಎಸ್ ಪಿ ಯೋಜನೆ ಹಾಗೂ ಗಿರಿಜನ ಉಪ ಯೋಜನೆಗೆ ಮೀಸಲಿಟ್ಟಿರುವ ಹಣವೂ ಸೇರಿದೆ.ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಕನ್ನಡ ಕಟ್ಟಾಳುವಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಎಚ್ಚರಿಸಿದ್ದಾರೆ.