ಪ್ರಿಯತಮನಿಗಾಗಿ ಮಕ್ಕಳನ್ನೇ ಕೊಂದ ಪಾಪಿ ತಾಯಿ

ತೆಲಂಗಾಣ,ಏ.5: ಬಾಲ್ಯದ ಸ್ನೇಹಿತ ಪ್ರಿಯತಮ ನನ್ನು ಮದುವೆಯಾಗಲು ಇಚ್ಚಿಸಿದ ಪಾಪಿ ಮಹಿಳೆ ಅದಕ್ಕಾಗಿ ತನ್ನ ಮೂರು ಮಕ್ಕಳನ್ನು ಕೊಂದಿರುವ ಹೇಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರ ಮಂಡಲದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯೊಬ್ಬಳು ತನ್ನ ಹಳೆಯ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ತಾನೇ ಹೆತ್ತ ಏನೂ ಅರಿಯದ ಮೂರು ಅಮಾಯಕ ಮಕ್ಕಳನ್ನು ಕೊಲೆ ಮಾಡಿದ್ದಾಳೆ.

ಮೃತರನ್ನು ಸಾಯಿಕೃಷ್ಣ (12), ಮಧುಪ್ರಿಯಾ (10), ಗೌತಮ್ (8) ಎಂದು ಗುರುತಿಸಲಾಗಿದೆ.

ಮಾರ್ಚ್ 27 ರಂದು ಈ ಘನಘೋರ ಹತ್ಯೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ಈ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿ ರಜಿತಾ ಅಲಿಯಾಸ್ ಲಾವಣ್ಯ ಮತ್ತು ಆಕೆಯ ಪ್ರಿಯಕರ ಶಿವಕುಮಾರ್ ನನ್ನು ಹೆಡೆಮುರಿ ಕಟ್ಟಿದ್ದಾರೆ.

ರಜಿತಾ ಅಲಿಯಾಸ್ ಲಾವಣ್ಯ 2013 ರಲ್ಲಿ ಬೀರಂಗುಡದ ರಾಘವೇಂದ್ರನಗರ ಕಾಲೋನಿಯ ನಿವಾಸಿ ಅವುರಿಚಿಂತಲ ಚೆನ್ನಯ್ಯ ಅವರನ್ನು ವಿವಾಹವಾಗಿದ್ದಳು.

ಚೆನ್ನಯ್ಯ ಲಾವಣ್ಯಗಿಂತ 20 ವರ್ಷ ದೊಡ್ಡವನಾಗಿದ್ದ. ರಜಿತಾ ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಚೆನ್ನಯ್ಯ ನೀರಿನ ಟ್ಯಾಂಕರ್ ಚಾಲಕ.

ರಜಿತಾ ಜೊತೆಯವರೆಲ್ಲ ಸೇರಿ ಸಹಪಾಠಿಗಳು ಪರಸ್ಪರ ಸಂಪರ್ಕಕ್ಕೆ ಬಂದು ಪರಸ್ಪರ ಭೇಟಿಯಾಗಲು ನಿರ್ಧರಿಸಿ ಅದಕ್ಕಾಗಿ ಒಂದು ಗೆಟ್-ಟುಗೆದರ್ ಆಯೋಜಿಸಿದರು.

ಈ ಕಾರ್ಯಕ್ರಮಕ್ಕೆ ರಜಿತಾ ಕೂಡ ಹೋಗಿದ್ದಳು. ಅದೇ ಕಾರ್ಯಕ್ರಮದಲ್ಲಿ ಆಕೆಯ ಬಾಲ್ಯದ ಸ್ನೇಹಿತ ಹಾಗೂ ಸಹಪಾಠಿ ಶಿವಕುಮಾರ್ ನನ್ನು ಭೇಟಿಯಾಗಿದ್ದಾಳೆ. ಈ ಶಿವಕುಮಾರ್ ನಲ್ಗೊಂಡ ಜಿಲ್ಲೆಯ ಗೋಡುಕೊಂಡದ ನಿವಾಸಿ.

ಅಲ್ಲಿಂದ ಇಬ್ಬರೂ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು, ಫೋನ್ ನಲ್ಲಿ ಮಾತನಾಡುವುದರಿಂದ ಆರಂಭವಾದ ಇವರ ಸಂಪರ್ಕ ನಂತರ ವಿಡಿಯೋ ಕಾಲ್ ವರೆಗೂ ಮುಂದುವರೆದಿತ್ತು. ಮೊದಲೇ ತನ್ನ 20 ವರ್ಷದ ಹಿರಿಯ ಗಂಡನನ್ನು ಕಂಡರೆ ಇಷ್ಟವಿಲ್ಲದ ರಜಿತಾ ಕ್ರಮೇಣ ಶಿವಕುಮಾರ್ ಗೆ ಹತ್ತಿರವಾದಳು. ಇದೇ ವಿಚಾರವಾಗಿ ಆಗಾಗ ತನ್ನ ಗಂಡ ಚೆನ್ನಯ್ಯ ಜೊತೆ ಜಗಳ ಕೂಡ ಮಾಡುತ್ತಿದ್ದಳು.

ಇದೇ ಸಂದರ್ಭದಲ್ಲಿ ಶಿವಕುಮಾರ್ ನನ್ನು ರಜಿತಾ ಮದುವೆಯಾಗುವಂತೆ ಕೇಳಿದ್ದಾಳೆ ಈ ವೇಳೆ ಶಿವಕುಮಾರ್ ನೀನು ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಂದರೆ ನಾನು ನಿನ್ನನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ, ಇದಕ್ಕೆ ರಜಿತಾ ನಮ್ಮ ಮದುವೆಗೆ ಮಕ್ಕಳು ಅಡ್ಡಿಯಾದರೇ ಅವರನ್ನು ಮುಗಿಸುತ್ತೇನೆ ಎಂದು ಹೇಳಿದ್ದಾಳೆ.

ಇದಕ್ಕೆ ಶಿವಕುಮಾರ್ ಕೂಡ ಒಪ್ಪಿಗೆ ಸೂಚಿಸಿ ಮಾರ್ಚ್ 27ರಂದು ಮಕ್ಕಳ ಕೊಲ್ಲಲು ಸಂಚು ರೂಪಿಸಿದ್ದ. ಅದರಂತೆ ಮಾರ್ಚ್ 27 ರ ಸಂಜೆ ಚೆನ್ನಯ್ಯ ಮನೆಯಿಂದ ಕೆಲಸಕ್ಕೆ ಹೊರಗಡೆ ಹೋದಾಗ ರಜಿತಾ ತನ್ನ ಮೂರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದುಬಿಟ್ಟಿದ್ದಾಳೆ.

ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಜಿತಾ ದೊಡ್ಡ ನಾಟಕ ರಚಿಸಿದ್ದಳು. ಕೆಲಸಕ್ಕೆ ಹೋದ ತನ್ನ ಗಂಡ ಮನೆಗೆ ಬರುತ್ತಲೇ ತನಗೆ ಅತೀವ ಹೊಟ್ಟೆ ನೋವು,ರಾತ್ರಿ ಕಬ್ಬು ತಿಂದ ಬಳಿಕ ತೀವ್ರ ಹೊಟ್ಟೆನೋವು ಬಂದಿದೆ ಎಂದು ಹೇಳಿದ್ದಾಳೆ.

ಹೆಂಡತಿಯ ನೋವಿನ ಯಾತನೆ ನೋಡಿದ ಗಂಡ ಚೆನ್ನಯ್ಯ ಆತಂಕಗೊಂಡು ಮಕ್ಕಳು ಮಲಗಿದ್ದಾರೆ ಎಂದು ಭಾವಿಸಿ ಮೊದಲು ರಜಿತಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಸ್ಪತ್ರೆಯಲ್ಲಿ ರಜಿತಾಳನ್ನು ದಾಖಲಿಸಿ ಬಳಿಕ ಮನೆಗೆ ಬಂದು ಮಕ್ಕಳನ್ನು ನೋಡಿದಾಗ ಅವರು ಸಾವನ್ನಪ್ಪಿರುವುದು ತಿಳಿದಿದೆ. ಕೂಡಲೇ ಚೆನ್ನಯ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾವಿಗೀಡಾದ ಮಕ್ಕಳ ತಂದೆ ಚೆನ್ನಯ್ಯ ಮತ್ತು ತಾಯಿ ರಜಿತಾಳ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರಜಿತಾಳ ಮೊಬೈಲ್ ನಿಂದ ಒಂದು ಸಂಖ್ಯೆಗೆ ಹೆಚ್ಚು ಬಾರಿ ಕರೆಗಳು ಹೋಗಿದ್ದು, ಈ ಕರೆಗಳನ್ನು ಪರಿಶಿಲೀಸಿ ಅನುಮಾನಗೊಂಡು ರಜಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಜಿತಾ ಪೊಲೀಸರ ತನಿಖೆ ವೇಳೆ ನಡೆದ ವಿಚಾರ ಬಾಯಿ ಬಿಟ್ಟಿದ್ದು, ಬಳಿಕ ಆಕೆಯ ಪ್ರಿಯಕರ ಶಿವಕುಮಾರ್ ನನ್ನು ಕೂಡ ಬಂಧಿಸಿದ್ದಾರೆ ಎಂದು ಸಂಗಾರೆಡ್ಡಿ ಎಸ್ಪಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ.