ಹಣ ಬಲ, ತೋಳ್ ಬಲದಲ್ಲಿ ಸಂಡೂರು ವಶಪಡಿಸಿಕೊಳ್ಳಲು ಬರುತ್ತಾರೆ ಎಚ್ಚರ-ಸಿಎಂ

Spread the love

ಸಂಡೂರು: ಹಣ ಬಲ, ತೋಳು ಬಲದಲ್ಲಿ ಸಂಡೂರನ್ನು ವಶಪಡಿಸಿಕೊಳ್ಳಲು ಬರ್ತಾರೆ ಎಚ್ಚರವಿರಿ,ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರ ಪ್ರಚಾರ ಸಭೆಯಲ್ಲಿ ಸಿಎಂ ಮಾತನಾಡಿದರು.

ನಾನು ಬಳ್ಳಾರಿಗೆ ಬಂದಾಗ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಭಾಷಣ ಮಾಡೋಕೆ ಜಾಗ ಕೊಡದೆ ಅವಮಾನ ಮಾಡಿದ್ದರು
ದೇವಸ್ಥಾನದ ಬಾಗಿಲಲ್ಲಿ ಒಬ್ಬನೆ ನಿಂತು ಭಾಷಣ ಮಾಡಿ ಹೋಗಿದ್ದೆ ಎಂದು ಸ್ಮರಿಸಿದರು.

ಯಾರ ಮನೆಗೆ ಹೋಗಿ ಕುಡಿಯೋಕೆ ನೀರು ಕೇಳಿದರೂ ನನಗೆ ನೀರು ಕೊಡಲು ಜನ ಹೆದರುತ್ತಿದ್ದರು ಎಂದು ರೆಡ್ಡಿಗಳ ಅವಧಿಯ ಘಟನೆಗಳನ್ನು ಉಲ್ಲೇಖಿಸಿ ದಬ್ಬಾಳಿಕೆ, ದೌರ್ಜನ್ಯದ ದಿನಗಳನ್ನು ನೆನೆದರು.

ಅಕ್ರಮ ಗಣಿಗಾರಿಕೆ ವಿರುದ್ಧ, ರೆಡ್ಡಿ ಬ್ರದರ್ಸ್ ಬಳ್ಳಾರಿಯನ್ನು ಹಾಳು ಮಾಡಲು ಬಿಡಬಾರದು ಎಂದು ನಾನು ಬೆಂಗಳೂರಿನಿಂದ ಪಾದಯಾತ್ರೆ ಮಾಡಿದೆ. ಬಳ್ಳಾರಿ ಜನರನ್ನು ಭಯಮುಕ್ತಗೊಳಿಸಿದ್ದು ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜಿಂದಾಲ್ ಗೆ ಕಾಲಿಟ್ಟರೂ ಜಿಲ್ಲಾ ಮಟ್ಟದ ಅಧಿಕಾರಿಗಳ್ಯರೂ ಯಡಿಯೂರಪ್ಪ ಅವರನ್ನು ಕಾಣಲು ಬರಲಿಲ್ಲ,ಆ ಮಟ್ಟಕ್ಕೆ ಅಧಿಕಾರಿಗಳಲ್ಲಿ ಭಯ ಸೃಷ್ಟಿ ಮಾಡಿದ್ದರು ಎಂದು ರೆಡ್ಡಿಗಳ ವಿರುದ್ದ ವಾಗ್ದಾಳಿ ನಡೆಸಿದರು.

ಮತ್ತೆ ಏನಾದರೂ ಜನಾರ್ಧನ ರೆಡ್ಡಿ ಪಟಾಲಂ ಬಳ್ಳಾರಿಯಲ್ಲಿ ಬೆಳೆದರೆ ಮತ್ತೆ ಅದೇ ಭೀತಿ, ಭಯದಲ್ಲಿ ಬಳ್ಳಾರಿ ನರಳಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ಕೊಡಬೇಡಿ. ಬಿಜೆಪಿಯನ್ನು ಸೋಲಿಸಿ ಬಳ್ಳಾರಿಯನ್ನು ಉಳಿಸಿ ಎಂದು ಸಿಎಂ ಕರೆ ನೀಡಿದರು.

ಸಂಡೂರಿನಲ್ಲಿ ರಸ್ತೆ, ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ, ಮೊಬೈಲ್ ಕ್ಲೀನಿಕ್ ಗಳು ಸೇರಿ ಏನೇನು ಅಭಿವೃದ್ಧಿ ಆಗಿದೆಯೋ ಅದೆಲ್ಲವೂ ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ ಮಾತ್ರ. ಬಿಜೆಪಿ ಅವಧಿಯಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಆರೋಪಿಸಿದರು.

ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ‌. ಅನ್ನಪೂರ್ಣಮ್ಮ ಅವರಿಗೆ ಬೀಳುವ ಪ್ರತೀ ಓಟು ನನಗೆ, ಸಂತೋಷ್ ಲಾಡ್ ಅವರಿಗೆ ಹಾಕಿದಂತೆ ಎಂದು ಸಿಎಂ ಹೇಳಿದರು.