(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಏ.7: ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ನಿಗಧಿತ ಜಾಗದಲ್ಲಿ ಮುದ್ರಿಸದೆ
ಕೆಳಗಿನ ಸಾಲಿನಲ್ಲಿ ಮುದ್ರಿಸಿರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನೇ ತಿರಸ್ಕರಿಸಿದ ಪ್ರಸಂಗ ನಡೆದಿದೆ.

ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಇದೇ ಏ. 17 ಹಾಗೂ 18 ರಂದು ನಡೆಯಲಿದೆ.

ಶಿಷ್ಟಾಚಾರದ ಪ್ರಕಾರ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರ ಹೆಸರನ್ನು ನಿಗಧಿತ ಸ್ಥಳದಲ್ಲಿ ಮುದ್ರಿಸದೆ ಕೆಳಗಿನ ಸಾಲಿನಲ್ಲಿ ಮುದ್ರಿಸಿ ರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ತಿರಸ್ಕರಿಸಿದರು.
ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರು ರೈತರ ಸಭೆ ನಡೆಸುತ್ತಿದ್ದರು.ಈ ಬಗ್ಗೆ ಮಾಹಿತಿ ಅರಿತು ಪಿಜಿ ಪಾಳ್ಯ ಗ್ರಾಮದ ಮುಖಂಡರು ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು.
ಶಾಸಕರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು, ಈ ವೇಳೆ ಶಾಸಕ ಮಂಜುನಾಥ್ ಆಹ್ವಾನ ಪತ್ರಿಕೆಯನ್ನು ತೆರೆದು ನೋಡಿ ತೀವ್ರ ಬೇಸರಪಟ್ಟರು.
ಏ.18ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಹಣಾ ಸ್ವಾಮಿಗಳು, ಕುದುರು ಮಠದ ಶ್ರೀ ಗುರು ಶಾಂತ ಸ್ವಾಮಿಗಳು, ಶ್ರೀರಂಗಪಟ್ಟಣದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು, ಸಾಲೂರು ಬೃಹನ್ ಮಠದ ಡಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಗುಂಡ್ಲುಪೇಟೆ ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚೆನ್ನವೀರ ಸ್ವಾಮಿಗಳು ಸೇರಿದಂತೆ ಹರಗುರು ಚಿರಮೂರ್ತಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳ ಪಟ್ಟಿಯ ಮೊದಲನೇ ಸಾಲಿನಲ್ಲಿ ಅಖಿಲ ಭಾರ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಧ್ಯಕ್ಷರಾದ ಶ್ರೀ ಶಂಕರ ಮಹದೇವ ಬಿದರಿ, ಗುಂಡ್ಲುಪೇಟೆ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ಅವರ ಹೆಸರನ್ನು ಮುದ್ರಿಸಲಾಗಿದೆ. ನಂತರ ಹನೂರು ಕ್ಷೇತ್ರದ ಬಿಜೆಪಿ ಮುಖಂಡ ಶ್ರೀ ನಿಶಾಂತ್ ಅವರು ತದನಂತರ ಕ್ಷೇತ್ರದ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಹೆಸರು ಉಳಿದಂತೆ ಮಾಜಿ ಶಾಸಕರುಗಳು ಮುಖಂಡರುಗಳ ಹೆಸರುಗಳನ್ನು ಮುದ್ರಿಸಲಾಗಿದೆ.

ಇದರಿಂದ ಅಸಮಾಧಾನಗೊಂಡ ಶಾಸಕರು ಯಾರು ಎಷ್ಟೇ ದೇಣಿಗೆ ನೀಡಿದರು ನಾನು ನಿಮ್ಮ ಕ್ಷೇತ್ರದ ಶಾಸಕ. ಅವರು ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬ ಉದ್ದೇಶಕ್ಕೆ ಉದ್ದೇಶಪೂರ್ವಕವಾಗಿ ಮೇಲಿನ ಸಾಲಿನಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ ಎಂಬುದು ನನಗೆ ಮಾಹಿತಿ ಇದೆ. ಶಿಷ್ಟಾಚಾರದ ಪ್ರಕಾರ ಕ್ಷೇತ್ರದ ಶಾಸಕರನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಂಡಂತೆ ನೀವು ನನಗೆ ಮತ ಹಾಕಿ ಅಥವಾ ಹಾಕದಿರಿ ನೀವು ನನ್ನ ಮತದಾರರು, ನಾನು ನಿಮ್ಮ ಶಾಸಕ, ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವುದಿಲ್ಲ, ಬರುತ್ತೇನೆ ಆದರೆ ಆಹ್ವಾನ ಪತ್ರಿಕೆಯನ್ನು ಸರಿಪಡಿಸಿ ಇಲ್ಲದಿದ್ದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಇವರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ಹಿಂದಿರುಗಿಸಿದರು.
ಈ ವೇಳೆ ಆಹ್ವಾನಿಸಲು ಬಂದಿದ್ದ ಮುಖಂಡರು ಮರು ಮಾತನಾಡದೆ ಆಹ್ವಾನ ಪತ್ರಿಕೆಯನ್ನು ವಾಪಸ್ ಪಡೆದು ಅಲ್ಲಿಂದ ಹಿಂತಿರುಗಿದರು.
ಇದೇ ವೇಳೆ ಗ್ರಾಮಸ್ಥರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ನಿಮ್ಮ ಕೆಲಸ ಏನೇ ಇದ್ದರೂ ಸಂತೋಷವಾಗಿ ಮಾಡುತ್ತೇವೆ ಎಂದು ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ಜೆ ಇ ಸುರೇಂದ್ರರವರನ್ನು ಕರೆದು ಕೂಡಲೇ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ತಾಕೀತು ಮಾಡಿದರು.