(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ತೆಳ್ಳನೂರು-ಬಂಡಳ್ಳಿ ಮಾರ್ಗದಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡು ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಗ್ಯ ಗ್ರಾಮದ ಗಾಯಾಳುಗಳನ್ನ,
ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಈ ವೇಳೆ ಗಾಯಾಳುಗಳಿಗೆ ಸಾಂತ್ವಾನ ಹೇಳಿ ವೈಯಕ್ತಿ ಆರ್ಥಿಕ ಸಹಾಯ ಮಾಡಿದರು.
ನಂತರ ಮಾಧ್ಯಮದವರಿಗೆ ಪ್ರತಿಕ್ರಿಸಿದ ಶಾಸಕರು,ಅಪಘಾತ ಆಗಬಾರದಿತ್ತು, ಇದು ಬಹಳ ಘೋರ ದುರಂತ, ಈ ಘಟನೆ ನನಗೂ ಬಹಳ ಬೇಸರ ತಂದಿದೆ. ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದರು.

ನಾನು ಅಧಿವೇಶನದಲ್ಲಿ ಇದ್ದ ಕಾರಣ ತಡವಾಗಿ ಬಂದು ಗಾಯಗೊಂಡಿರುವ ೫೪ ಜನರ ಯೋಗ ಕ್ಷೇಮ ವಿಚಾರಿಸಿದ್ದೇನೆ. ಅಲ್ಲಿಯ ವರೆಗೆ ಸಂಬಧಪಟ್ಟ ಅಧಿಕಾರಿಗಳಿಂದ ಗಾಯಾಳುಗಳ ಸ್ಥಿತಿಗತಿಗಳ ಕುರಿತು ಕ್ಷಣಕ್ಷಣಕ್ಕೂ ಮಾಹಿತಿ ಪಡೆದು ಕೊಳ್ಳುತ್ತಿದ್ದೆ. ಮತ್ತು ಎಲ್ಲರೂ ಗುಣಮುಖರಾಗುವಂತೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಸಂಬಂಧಪಟ್ಟ ವೈದ್ಯರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ತೆಳ್ಳನೂರು, ಬಂಡಳ್ಳಿ,ಶಾಗ್ಯ ಮಾರ್ಗದ ರಸ್ತೆ ಅತ್ಯಂತ ಕಿರಿದಾಗಿದ್ದು, ಈ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಅನುಮೋದನೆಗೊಂಡಿದೆ, ಶೀಘ್ರದಲ್ಲೇ ಉತ್ತಮ ರಸ್ತೆ ನಿರ್ಮಾಣ ಮಾಡಿ ಆ ಭಾಗದ ಜನರ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲಿಸಿ ಮತ್ತು ರಾತ್ರಿಯ ವೇಳೆ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಸಲಹೆ ನೀಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಅಪಘಾತಗಳು ಹೆಚ್ಚುತ್ತಿವೆಯಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ,ಹೆದ್ದಾರಿ ರಸ್ತೆ ಮತ್ತು ಹೊಸ ರಸ್ತೆಗಳು ನಿರ್ಮಾಣವಾದ ನಂತರ ಸಾರ್ವಜನಿಕರು ಆತುರ ಪಡದೆ ನಿಧಾನವಾಗಿ ಚಲಿಸಬೇಕಿದೆ,ಯಾವುದೇ ರೀತಿಯ ಮಧ್ಯ ಸೇವಿಸಿ ಚಾಲನೆ ಮಾಡಬಾರದು ಎಂದು ಹೇಳಿದರು.
ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ನನ್ನ ಗಮನದಲ್ಲೂ ಇದ್ದು ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಅಪಘಾತ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪಘಾತದಲ್ಲಿ ಮೃತಪಟ್ಟ ಖಾಸಗಿ ಬಸ್ ನಿರ್ವಾಹಕ ದೊಡ್ಡಿಂದುವಾಡಿಯ ನವೀನ್ ಕುಟುಂಬಕ್ಕೆ ಬಸ್ ನ ಮಾಲೀಕರು ೫ ಲಕ್ಷ ರೂ. ವೈಯಕ್ತಿಕ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿರುವುದು, ಅದರೊಟ್ಟಿಗೆ ಬಸ್ ನ ಇನ್ಸೂರೆನ್ಸ್ ಕ್ಲೇಮ್ ಮಾಡಿಕೊಳ್ಳುವಂತೆ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಇದೆ,ಜತೆಗೆ ಸರ್ಕಾರದ ವತಿಯಿಂದಲೂ ಅವರ ಕುಟುಂಬ ವರ್ಗದವರಿಗೆ ನೆರವಾಗಲು ಬದ್ಧ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಹನೂರು ತಹಶೀಲ್ದಾರ್ ಗುರುಪ್ರಸಾದ್, ಮುಖಂಡರಾದ ಮಂಜೇಶ್, ಸಿಂಗಾನಲ್ಲೂರು ರಾಜಣ್ಣ, ಕರಿಯನಪುರ ಸಿದ್ದಯ್ಯ, ಬಂಡಳ್ಳಿ ಬಾಬು, ಗೋವಿಂದ, ಮಧುವನಹಳ್ಳಿ ಮಾದೇಶ್, ಬಾಬು, ಪಾಳ್ಯ ಗೋಪಾಲನಾಯಕ, ಸಿದ್ದರಾಜು, ರಾಚಯ್ಯ, ಕುಮಾರ, ರಾಜು, ಮಂಗಲ ಚಿಕ್ಕಯ್ಯ ಮತ್ತಿತರರು ಹಾಜರಿದ್ದರು.