ಶಾಸಕ ಸದಸ್ಯತ್ವದಿಂದ ಅನರ್ಹಗೊಂಡ ಅಬ್ಬಾಸ್ ಅನ್ಸಾರಿ

Spread the love

ಲಖನೌ: ಉತ್ತರಪ್ರದೇಶದ ಮೌ ಸದರ್ ಕ್ಷೇತ್ರದ ಶಾಸಕ ಅಬ್ಬಾಸ್ ಅನ್ಸಾರಿ ಶಾಸಕ ಸದಸ್ಯತ್ವದಿಂದ‌ ಅನರ್ಹಗೊಂಡಿದ್ದಾರೆ.

ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿಗೆ ಸಂಸದ-ಶಾಸಕ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದೆ.

ಶಿಕ್ಷೆ ವಿಧಿಸಿದ ಬೆನ್ನಲ್ಲೆ ಅಬ್ಬಾಸ್ ಅನ್ಸಾರಿ ವಿಧಾನಸಭೆಯ ಸದಸ್ಯತ್ವವೂ ಕೊನೆಗೊಂಡಿದೆ.

ಈ ಹಿನ್ನೆಲೆಯಲ್ಲಿ ಯುಪಿ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಅವರು ಮೌ ಸದರ್ ವಿಧಾನಸಭಾ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಭಾನುವಾರ ರಜಾದಿನವಾಗಿದ್ದರೂ ಕಚೇರಿಯನ್ನು ಓಪನ್ ಮಾಡಿ ಆಯೋಗಕ್ಕೆ ಪತ್ರವನ್ನು ಕಳುಹಿಸಲಾಗಿದ್ದು,ಮೌ ಸದರ್ ಸ್ಥಾನದಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ.

ಮೌ ವಿಧಾನಸಭಾ ಕ್ಷೇತ್ರವನ್ನು 1996ರಿಂದ ಅನ್ಸಾರಿ ಕುಟುಂಬವೇ ತನ್ನ ಹಿಡಿದಲ್ಲಿಟ್ಟುಕೊಂಡಿದೆ. 1996ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್‌ನಲ್ಲಿ ಮುಖ್ತಾರ್ ಅನ್ಸಾರಿ ಮೊದಲ ಬಾರಿಗೆ ಮೌ ಸದರ್‌ನಿಂದ ಗೆದ್ದರು. ಅದಾದ ನಂತರ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಮರು ಆಯ್ಕೆಯಾದರು. ಇದರಲ್ಲಿ, ಅಬ್ಬಾಸ್ ಅನ್ಸಾರಿ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ಒಮ್ಮೆ ತಮ್ಮ ಪಕ್ಷದ ಕ್ವಾಮಿ ಏಕ್ತಾ ದಳದ ಟಿಕೆಟ್‌ನಲ್ಲಿ ಶಾಸಕರಾಗಿ ಆಯ್ಕೆಯಾದರು. 2017ರ ವಿಧಾನಸಭಾ ಚುನಾವಣೆಯಲ್ಲಿ, ಅಬ್ಬಾಸ್ ಅನ್ಸಾರಿ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿ ಗೆದ್ದರು.

ನ್ಯಾಯಾಲಯವು ಅಬ್ಬಾಸ್ ಅನ್ಸಾರಿ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 189, 153A, 171F ಮತ್ತು 506 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ಅಬ್ಬಾಸ್ ಅನ್ಸಾರಿಗೆ ಸೆಕ್ಷನ್ 189 ಮತ್ತು 153A ಅಡಿಯಲ್ಲಿ 2 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. 171F ಅಡಿಯಲ್ಲಿ 6 ತಿಂಗಳ ಶಿಕ್ಷೆ ಮತ್ತು ಸೆಕ್ಷನ್ 506 ಅಡಿಯಲ್ಲಿ 1 ವರ್ಷದ ಶಿಕ್ಷೆ ವಿಧಿಸಲಾಗಿದೆ. ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

2022ರ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಅಬ್ಬಾಸ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಪ್ರಚೋದನಕಾರಿ ಭಾಷಣ ಮಾಡಿದರು. ಅಧಿಕಾರಿಗಳಿಗೆ ಬೆದರಿಕೆ ಹಾಕಿದರು. ಈ ಸಂಬಂಧ ಮೌದಲ್ಲಿನ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಯಿತು.