ಮೈಸೂರು: ನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಪ್ರಕರಣ ಸಂಬಂಧ ಸಂಚಾರಿ ಪೊಲೀಸರು ಭಾರೀ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.
ಚಾಲನೆಗೆ ಅನುಮತಿ ಇಲ್ಲದಿದ್ದರೂ ಬಾಲಕ ಬೈಕ್ ಓಡಿಸುತ್ತಿದ್ದುದ್ದನ್ನು ಪತ್ತೆಹಚ್ಚಿದ ಪೊಲೀಸರು, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ 25,000 ರೂ ದಂಡ ವಿಧಿಸಿದ್ದಾರೆ.
ವಿಜಯನಗರದ ಬಸವನಹಳ್ಳಿ ಸಮೀಪದ ರಿಂಗ್ ರಸ್ತೆ ಬಳಿ ಕಳೆದ ಮೂರುದಿನಗಳ ಹಿಂದೆ, ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರ ಕೈಗೆ ಚಾಲನೆ ಮಾಡುವಾಗಲೇ ಬಾಲಕ ಸಿಕ್ಕಿ ಬಿದ್ದಿದ್ದ.
ಈ ವೇಳೆ ಹೆಲ್ಮೆಟ್ ಇಲ್ಲದೆ, ನಿಯಮ ಉಲ್ಲಂಘನೆ ಮಾಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಟ್ರಾಫಿಕ್ ಪೊಲೀಸರು ತಡೆದು ವಿಚಾರಣೆ ಮಾಡಿದಾಗ, ಆತ 18 ವರ್ಷ ಪೂರೈಸಿಲ್ಲ ಎಂಬುದು ಗೊತ್ತಾಗಿದೆ.
ಬಾಲಕ ಅಪ್ರಾಪ್ತ ವಯಸ್ಸಿನವ ನಾಗಿರುವುದರಿಂದ ಮೋಟಾರು ವಾಹನ ಕಾಯ್ದೆ ಪ್ರಕಾರ ಗಂಭೀರ ಉಲ್ಲಂಘನೆ, ವಾಹನ ಮಾಲೀಕರಿಗೆ 25,000 ದಂಡ ವಿಧಿಸಿ ವಾಹನವನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಅಪ್ರಾಪ್ತರು ಬೈಕ್ ಮತ್ತು ಕಾರು ಚಾಲನೆ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಇಲಾಖೆ ವಿಶೇಷ ನಿಗಾವಹಿಸಿದ್ದು,ಸಾರ್ವಜನಿಕರು ತಮ್ಮ ಮಕ್ಕಳು ವಾಹನ ಚಾಲನೆ ಮಾಡದಂತೆ ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.
