ಹುಣಸೂರು: ಸರ್ಕಾರಗಳೇನೊ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತ ವಿದ್ಯಾರ್ಥಿ ನಿಲಯಗಳನ್ನು ತೆರೆದು ಎಲ್ಲಾ ಅನುಕೂಲ ಕಲ್ಪಿಸಿ ಕೊಟ್ಟಿದೆ.
ಆದರೆ ಈ ವಿದ್ಯಾರ್ಥಿನಿಲಯಗಳಿಗೆ ಭದ್ರತೆಯ ಅವಶ್ಯಕತೆ ಇದ್ದು ಕಾಣುತ್ತಿದೆ.
ಏಕೆಂದರೆ ಇಲ್ಲೊಂದು ಸಣ್ಣ ಉದಾಹರಣೆ ಇದೆ.
ಹುಣಸೂರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿನಿಯರು ವಿವಿಧ ತರಗತಿಗಳಲ್ಲಿ ಓದುತ್ತಿದ್ದಾರೆ. ಇವರನ್ನು ನೋಡಿಕೊಳ್ಳಲು ವಾರ್ಡನ್ ಸೇರಿ ನಾಲ್ಕು ಮಂದಿ ಸಿಬ್ಬಂದಿ ಇದ್ದಾರೆ.
ಆದರೆ ಈ ವಿದ್ಯಾರ್ಥಿ ನಿಲಯಕ್ಕೆ ಜರೂರಾಗಿ ರಕ್ಷಣೆ ಬೇಕೇ ಬೇಕು. ಏಕೆಂದರೆ ಇಂದು ಬೆಳಗ್ಗೆ ಒಬ್ಬಳು ಮಹಾತಾಯಿ ವಿದ್ಯಾರ್ಥಿನಿಲಯಕ್ಕೆ ಏಕಾಏಕಿ ನುಗ್ಗಿ ಗಲಾಟೆ ಮಾಡಿ ಹೋಗಿದ್ದಾರೆ.
ನನ್ನ ಮಕ್ಕಳನ್ನು ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಅವರನ್ನು ನಾನು ಕರೆದುಕೊಂಡು ಹೋಗುತ್ತೇನೆ. ಓದುವುದು ಬೇಡ ಎಂದು ಗಲಾಟೆ ಮಾಡಿ ನಂತರ ಅಡುಗೆ ಮನೆಗೆ ನುಗ್ಗಿ ಮಕ್ಕಳಿಗೆ ವಿತರಿಸಲು ಇಟ್ಟಿದ್ದ ಹಾಲು ಮತ್ತು ಬೆಳಗಿನ ಉಪಹಾರವನ್ನು ಚೆಲ್ಲಿ ಕೆಟ್ಟದಾಗಿ ವರ್ತಿಸಿದ್ದಾಳೆ.
ಜತೆಗೆ ತನ್ನ ಮಕ್ಕಳ ಮೇಲೆ ಹಲ್ಲೆ ಮಾಡಿ ಸಿಬ್ಬಂದಿಗೂ ಆವಾಜ್ ಹಾಕಿದ್ದಾಳೆ.ಆಕೆ ನಿಜವಾಗಿ ಆಹೆಣ್ಣುಮಕ್ಕಳ ತಾಯಿಯೆ ಎಂಬ ಅನುಮಾನ ಕಾಡುತ್ತಿದೆ.
ವಿಷಯ ತಿಳಿದ ನಂತರ ಸ್ಥಳೀಯ ಪೊಲೀಸರು ಬಂದು ಆಕೆಗೆ ಬುದ್ದಿ ಹೇಳಿದ್ದಾರೆ.ಇದು ಒಳ್ಳೆಯದೇ.ಆದರೆ ಇದೇ ರೀತಿ ಇನ್ಯಾರಾದರು ಅಪರಿಚಿತರು ನುಗ್ಗಿ ಏನಾದರೂ ಅನಾಹುತ ಮಾಡಿದರೆ ಹೊಣೆ ಯಾರು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪ್ರಶ್ನಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಆಗಮಿಸಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಸಿಬ್ಬಂದಿಗೆ ಯಾರನ್ನೂ ಒಳಗೆ ಬಿಡದಂತೆ ತಾಕೀತು ಮಾಡಬೇಕು ಅಲ್ಲದೆ ಒಬ್ಬರು ಸೆಕ್ಯೂರಿಟಿಯನ್ನಾದರೂ ಇಲ್ಲಿಗೆ ನೇಮಿಸಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.
ಇದೇ ರೀತಿ ಮತ್ಯಾರಾದರೂ ಬಂದರೆ ಏನು ಮಾಡಬೇಕು,ಅಧಿಕಾರಿಗಳು ಕೂಡಲೇ ಇಂತಹ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳತ್ತ ಗಮನ ಹರಿಸಿ ಬಿಗಿ ಬಂದೋಬಸ್ತ್ ಮಾಡಲೇಬೇಕಿದೆ.
ಇದು ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಆಗಿರುವುದರಿಂದ ಅತಿಹೆಚ್ಚಿನ ಭದ್ರತೆ ಬೇಕಿದೆ