ಮೈಸೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರು, ಕೆಎಸ್ಆರ್ಟಿಸಿ ಬಸ್ ಗಳು ನಿರ್ವಾಹಕ, ಚಾಲಕರುಗಳಿಗೆ ಕಪ್ಪು ಮಸಿ ಬಳಿದು ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಸೇನಾ ಪಡೆ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ಸೇನಾ ಪಡೆ ಎಂಇಎಸ್ ಪುಂಡರ ದೌರ್ಜನ್ಯ ಖಂಡಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತು.

ದಿನೇ ದಿನೇ ಬೆಳಗಾವಿಯಲ್ಲಿ ಎಂಇಎಸ್ ನವರ ದಬ್ಬಾಳಿಕೆ ಹೆಚ್ಚಾಗಿದ್ದು, ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ತದನಂತರ ಫೋಕ್ಸೋ ಪ್ರಕರಣವನ್ನು ದಾಖಲಿಸಿರುವುದು ಅತ್ಯಂತ ಖಂಡನೀಯ. ಇದನ್ನು ಕರ್ನಾಟಕ ಸೇನಾ ಪಡೆ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.

ನಾವು ಕನ್ನಡಿಗರು ಶಾಂತಿ ಪ್ರಿಯರು, ಎಲ್ಲಾ ರಾಜ್ಯದ ಜನರನ್ನು ಗೌರವಿಸಿ,ನಮ್ಮ ರಾಜ್ಯದಲ್ಲಿ ಜಾಗ ನೀಡಿದ್ದೇವೆ. ನಮ್ಮ ಸಹನೆ, ಶಾಂತಿಯನ್ನು ಕೆಣಕಬೇಡಿ ಎಂದು ಮರಾಠಿಗರಿಗೆ ಕಠಿಣ ಎಚ್ಚರಿಕೆ ನೀಡಿದರು.
ರಾಜ್ಯದ ಗಡಿಯಲ್ಲಿ ಸೌಹಾರ್ದತೆ ಹಾಳು ಮಾಡಿ, ಎರಡು ರಾಜ್ಯಗಳ ನಡುವೆ ಅಶಾಂತಿ ಉಂಟು ಮಾಡುತ್ತಿರುವ ಈ ಎಂಇಎಸ್ ಸಂಘಟನೆಯನ್ನು ಸರ್ಕಾರ ಈ ಕೂಡಲೇ ಬ್ಯಾನ್ ಮಾಡಬೇಕು. ಹಾಗೂ ಕಾನೂನು ವ್ಯವಸ್ಥೆಗೆ ಭಂಗ ತರುತ್ತಿರುವ ಇವರುಗಳ ವಿರುದ್ಧ ಗೃಹ ಸಚಿವರು ಸೂಕ್ತ ಕ್ರಮ ಕೈಗೊಂಡು ಇದಕ್ಕೆ ಶಾಶ್ವತವಾಗಿ ಅಂತ್ಯ ಹಾಡಬೇಕು ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿ ಭಾಷೆ ಬಗ್ಗೆ ಅಭಿಮಾನವಿಲ್ಲದ ಹೊರ ರಾಜ್ಯಗಳ ಐಎಎಸ್, ಐಪಿಎಸ್ ಅಧಿಕಾರಿಗಳ ಬದಲು ನಮ್ಮ ಕನ್ನಡ ನಾಡಿನ ಅಧಿಕಾರಿಗಳನ್ನು ಗಡಿ ಜಿಲ್ಲೆಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಯಾವೊಬ್ಬ ಚುನಾಯಿತ ಪ್ರತಿನಿಧಿಗಳು, ಬೆಳಗಾವಿ ಸಚಿವರು ಕಂಡಕ್ಟರ್ ಹಾಗೂ ಕನ್ನಡಿಗರ ಪರವಾಗಿ ಮಾತನಾಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕನ್ನಡಿಗರನ್ನು ನಿರ್ಲಕ್ಷಿಸುವ ರಾಜಕಾರಣಿಗಳು ಮುಂಬರುವ ಚುನಾವಣೆಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಕೂಡಲೇ ಮರಾಠಿಗಳ ಪುಂಡಾಟಿಕೆ ಅಟ್ಟಹಾಸಕ್ಕೆ ಬ್ರೇಕ್ ಕಾಕಿ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಿ, ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲಿನ ದಾಳಿಯನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.ಪ್ರಭು ಶಂಕರ್, ಕೃಷ್ಣಪ್ಪ, ಪ್ರಜೀಶ್, ಕುಮಾರ್ ಗೌಡ, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಮಧುವನ ಚಂದ್ರು, ವರಕೂಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ನಾಗರಾಜು, ನೇಹಾ, ಅಂಬಾ ಅರಸ್, ಭಾಗ್ಯಮ್ಮ, ಡಾ. ಶಾಂತರಾಜೇ ಅರಸು, ನಾರಾಯಣಗೌಡ, ಸುನಿಲ್ ಅಗರ್ವಾಲ್, ಆನಂದ್ ಗೌಡ, ರಘು ಅರಸ್, ಬಸವರಾಜು, ಪರಿಸರ ಚಂದ್ರು, ಪ್ರದೀಪ್, ದರ್ಶನ್ ಗೌಡ, ಪ್ರಭಾಕರ್, ರಘು, ಹನುಮಂತೇಗೌಡ, ಶಿವರಾಂ ಗೌಡ, ಗಣೇಶ್ ಪ್ರಸಾದ್, ರಾಮಕೃಷ್ಣೇಗೌಡ, ಸ್ವಾಮಿ ಗೌಡ, ಅಕ್ಬರ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.