ನದಿಯಲ್ಲಿ ಕೊಚ್ಚಿಹೋಗಿದ್ದ ವೈದ್ಯ‌ ವಿದ್ಯಾರ್ಥಿ ಮೃತ ದೇಹ ಪತ್ತೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮಂಗಳವಾರ ಶಿವನಸಮುದ್ರದ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿಯ ಮೃತ ದೇಹ ಬುಧವಾರ ಬೆಳಿಗ್ಗೆ
ಪತ್ತೆಯಾಗಿದೆ.

ಇಂದು ಬೆಳಿಗ್ಗೆ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಮೃತನ ತಂದೆ ನನ್ನ ಮಗನನ್ನು ಆತನ ಸಹಪಾಠಿಗಳು ಶಿವನ ಸಮುದ್ರಕ್ಕೆ ಕರೆತಂದು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ದೂರು ದಾಖಲಾಗಿದೆ.

ಹಾಗಾಗು ಈ ಪ್ರಕರಣ ಕೊಲೆ ತಿರುವು ಪಡೆದು ಕೊಂಡಿದೆ.

ಕೆಎಂಎಫ್ (ಬೆಂಗಳೂರು ಡೈರಿ) ವ್ಯವಸ್ಥಾಪಕರಾದ ಹಾಲಿ ಹಾರೋಹಳ್ಳಿ ನಿವಾಸಿ ಡಾ. ಎನ್.ಶಿವಶಂಕರ್ ಅವರ ಪುತ್ರ ಬಿ.ಎಸ್. ನಂದನ್ ಗೌಡ (22) ನದಿ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ವಿದ್ಯಾರ್ಥಿ.

ನಿನ್ನೆ ಶಿವನಸಮುದ್ರಕ್ಕೆ ಪ್ರವಾಸ ಬಂದಿದ್ದ ಹಾರೋಹಳ್ಳಿಯ ದಯಾನಂದ ಸಾಗರ್ ಹಾಗೂ ವೈದ್ಯಕೀಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದರು.

ಈ ಪೈಕಿ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಮತ್ತೋರ್ವ ವಿದ್ಯಾರ್ಥಿ ಕೆಎಂಎಫ್ (ಬೆಂಗಳೂರು ಡೈರಿ) ವ್ಯವಸ್ಥಾಪಕರಾದ ಶಿವಶಂಕರ್ ರವರ ಪುತ್ರ ನಂದನ್ ಗೌಡ (22) ನದಿಯಲ್ಲಿ ಕೊಚ್ಚಿ ಹೋಗಿದ್ದರು.

ಮೂಲತಹ ದೊಡ್ಡಬಳ್ಳಾಪುರದವರಾದ ಶಿವಶಂಕರ್ ಅವರ ಕುಟುಂಬ ಹಾಲಿ ಹಾರೋಹಳ್ಳಿಯಲ್ಲಿ ವಾಸವಿತ್ತು ಇವರಿಗೆ ಇಬ್ಬರು ಮಕ್ಕಳು. ಮೊದಲನೇ ಮಗಳು ಎಂ ಎಸ್ ಮಾಡಿಕೊಂಡು ವಿದೇಶದಲ್ಲಿದ್ದಾರೆ. ಕಿರಿಯ ಪುತ್ರ ಮೃತ ನಂದನ್ ಗೌಡ ಹಾರೋಹಳ್ಳಿಯಲ್ಲಿರುವ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದರು.

ಪ್ರಕರಣ:ಮಂಗಳವಾರ ಬೆಳಿಗ್ಗೆ ಹಾರೋಹಳ್ಳಿಯ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 1. ಚತುರ, 2. ತುಷಾರ್, 3. ಪವನ್, 4. ಪ್ರಫುಲ್ಲ, 5. ತನ್ಮಯ್, 6. ರಜತ್, 7. ಮೃತ ನಂದನ್ ಗೌಡ ಸೇರಿದಂತೆ 7 ಮಂದಿ ವಿದ್ಯಾರ್ಥಿಗಳು ಕಾರಿನಲ್ಲಿ ಶಿವನಸಮುದ್ರಕ್ಕೆ ಪ್ರವಾಸಕ್ಕೆ ಕಾಲೇಜಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಬಂದಿಳಿದಿದ್ದರು.

ಈ ಎಲ್ಲರೂ ಇಲ್ಲಿನ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಿ ನಂತರ ದರ್ಗಾಕ್ಕೆ ಬಂದಿದ್ದಾರೆ. ಇಲ್ಲಿ ಮೀನು ತಿಂದು ದರ್ಗದ ಹಿಂಭಾಗ ಇರುವ ಕಾವೇರಿಯ ನದಿ ಬಳಿ ಬಂದಿದ್ದಾರೆ.

ಈ ವೇಳೆ 7 ಮಂದಿ ವಿದ್ಯಾರ್ಥಿಗಳ ಪೈಕಿ ನಾಲ್ಕು ಮಂದಿ ವಿದ್ಯಾರ್ಥಿಗಳು ಈಜಲೆಂದು ಗಗನಚುಕ್ಕಿ ಬಳಿ ನದಿಗೆ ಇಳಿದಿದ್ದಾರೆ. ನದಿಯ ನೀರಿನಲ್ಲಿ ಸೆಳೆತವಿದಿದ್ದರಿಂದ ಈಜಲಾಗದೆ ಪರದಾಡುತ್ತಿದ್ದ ಮೂವರು ನದಿಯ ನಡುವೆ ಇದ್ದ ಬಂಡೆ ಹಿಡಿದು ಕಿರುಚಾಡ ತೊಡಗಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ‌ ಕೂಡಲೇ ಕೊಳ್ಳೇಗಾಲ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಅರುಣ್ ಕುಮಾರ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ಈಜಲಾಗದೆ ಪರದಾಡುತ್ತಿದ್ದ ಪವನ್ (23) ಪ್ರಫುಲ್ (22) ತುಷಾರ್ (20) ಎಂಬ ವಿದ್ಯಾರ್ಥಿಗಳನ್ನು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ್ದರು, ಮತ್ತೋರ್ವ ವಿದ್ಯಾರ್ಥಿ ನಂದಕುಮಾರ್ ನದಿಯಲ್ಲಿ ಕೊಚ್ಚಿ ಹೋಗಿದ್ದ.

ವಿಷಯ ತಿಳಿದ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದಾರೆ.

ನದಿಯಲ್ಲಿ ಕೊಚ್ಚಿ ಹೋದ ನಂದನ್ ಗೌಡನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದರು. ಇಂದು (ಬುಧವಾರ) ಬೆಳಿಗ್ಗೆ ನದಿಯಲ್ಲಿ ನಂದನ್ ಗೌಡನ ಮೃತ ದೇಹ ದೊರಕಿದೆ.

ಕೊಲೆ ಆರೋಪ:
ನಿನ್ನೆ ತಾಪತ್ತೆ ದೂರು ನೀಡಿದ್ದ ಮೃತ ನಂದನ್ ಗೌಡ ತಂದೆ ಶಿವಶಂಕರ್ ಅವರು ಇಂದು ಮಗನ ಮೃಗ ದೇಹ ನೋಡಿ ನನ್ನ ಮಗನನ್ನು ಅವನ ಸಹಪಾಠಿಗಳಾದ ಶಿವಮೊಗ್ಗದ ಶಾಂತಿನಗರದ ತನಯ್, ಬೆಂಗಳೂರಿನ ಅಮೃತ ಹಳ್ಳಿಯ ತುಷಾರ್, ಶಿವಮೊಗ್ಗದ ಪವನ್, ಬೆಂಗಳೂರಿನ ವಿಜಯನಗರದ ಪ್ರಫುಲ್, ಬೆಂಗಳೂರಿನ ರಜತ್, ಕೊಡಗು ಜಿಲ್ಲೆ ಸೋಮವಾರಪೇಟೆಯ ಚತುರ್ ಅವರುಗಳು ಬಲವಂತವಾಗಿ ನನ್ನ ಮಗ ನಂದನ್ ಗೌಡನನ್ನು ನಮಗೆ ತಿಳಿಯದಂತೆ ಶಿವನಸಮುದ್ರಕ್ಕೆ ಕರೆದುಕೊಂಡು ಬಂದು ಅಮಾಯಕನಾದ ನನ್ನ ಮಗನನ್ನು ರ್‍ಯಾಗ್ ಮಾಡಿ ಬಟ್ಟೆ ಬಿಚ್ಚಿಸಿ ನೀರಿಗೆ ಇಳಿಸಿ ಕೊಲೆ ಮಾಡಿದ್ದಾರೆ ಎಂದು ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಎಸ್. ಎ. ಸುಪ್ರೀತ್ ಅವರು ಮೃತ ದೇಹವನ್ನು ನದಿಯಿಂದ ಹೊರತೆಗೆಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಅಲ್ಲಿನ ವೈದ್ಯರಿಂದ ಪಂಚನಾಮೆ ನಡೆಸಿದ ಬಳಿಕ ವಾರಸುದರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.