ಮೇ.29 ರಂದುಸಾವರ್ಕರ್ ಸಮ್ಮಾನ್ ಪ್ರಶಸ್ತಿ ಕಾರ್ಯಕ್ರಮ

Spread the love

ಮೈಸೂರು: ವೀರ ಸಾವರ್ಕರ್ 142ನೇ ಜನ್ಮ ಜಯಂತಿ ಹಾಗೂ ಸಾವರ್ಕರ್ ಸಮ್ಮಾನ್ ಪ್ರಶಸ್ತಿ-2025ನ್ನು ಮೇ.29 ರಂದು ಸಂಜೆ 5-30ಕ್ಕೆ ನಗರದ ಕರ್ನಾಟಕ ಕಲಾಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಾವರ್ಕರ್ ಪ್ರತಿಷ್ಠಾನ ಮೈಸೂರು ಸದಸ್ಯರಾದ ರಾಕೇಶ್ ಭಟ್, ಶಿವಕುಮಾರ್ ಚಿಕ್ಕಕಾನ್ಯ, ಸಂದೇಶ,ಎ.ರಾಘವೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ ಬ್ರೋಶರ್ ಬಿಡುಗಡೆ ಮಾಡಿದರು.

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ರವರ ಬದುಕು, ಬರಹ ಹಾಗೂ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಸಾವರ್ಕರ್ ಪ್ರತಿಷ್ಠಾನ ಮೈಸೂರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು,ಅವುಗಳಲ್ಲಿ ಪ್ರತಿಷ್ಠಿತ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಸಹ ಒಂದು ಎಂದು ಅವರು ಹೇಳಿದರು.

ಈ ಪ್ರಶಸ್ತಿಯನ್ನು ಸಾವರ್ಕರ್ ವಿಷಯದಲ್ಲಿ ಗಣನೀಯವಾಗಿ ಕೆಲಸ ಮಾಡಿರುವ ವ್ಯಕ್ತಿಯನ್ನು ಗುರುತಿಸಿ ಪ್ರತಿ ವರ್ಷ ವೀರ ಸಾವರ್ಕರ್ ಜಯಂತಿ ಸಂದರ್ಭದಲ್ಲಿ ಕೊಡ ಮಾಡಲಾಗುತ್ತದೆ.

ಪ್ರಶಸ್ತಿಯು ವೀರ ಸಾವರ್ಕರ್ ಪುತ್ತಳಿ, ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಸಾವರ್ಕರ್ ಕುರಿತು ಬಹುವಾಗಿ ಅಧ್ಯಯನಗಳನ್ನು ಮಾಡಿ, ಅನ್ಯ ಭಾಷೆಯಿಂದ ಕನ್ನಡಕ್ಕೆ ಪುಸ್ತಕಗಳನ್ನು ಅನುವಾದಿಸಿರುವುದರ ಜೊತೆಗೆ ಸ್ವತಃ ಅನೇಕ ಪುಸ್ತಕಗಳನ್ನು ಬರೆದಿರುವ ಖ್ಯಾತ ಲೇಖಕರು ಹಾಗೂ ಚಿಂತಕರಾದ ಜಿ.ಬಿ. ಹರೀಶ ಅವರಿಗೆ ಈ ಬಾರಿಯ ಸಾವರ್ಕರ್ ಸಮ್ಮಾನ್ ಪ್ರಶಸ್ತಿ – 2025″ನ್ನು ಪ್ರದಾನ ಮಾಡಲಾಗುತ್ತದೆ ಎಂದು ರಾಕೇಶ್ ಭಟ್ ಮಾಹಿತಿ ನೀಡಿದರು.

ಮೂಲತಃ ಹಾಸನ ಜಿಲ್ಲೆಯವರಾದ ಡಾ. ಜಿ.ಬಿ.ಹರೀಶ ಅವರು ಹುಟ್ಟಿದ್ದು 1975ರಲ್ಲಿ, ಎಂ.ಎ., ಎಂ.ಬಿ.ಎ ಹಾಗೂ ಪಿಎಚ್. ಡಿ ಪದವೀಧರರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜ ಯೋಜನೆಯ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ.ವಿ.ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಜಾವಾಣಿಯ ಮುಖ್ಯ ಉಪಸಂಪಾದಕರಾಗಿ, ವಿಜಯವಾಣಿಯ ಸಂಪಾದಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಮೂರು ವರ್ಷಗಳ ಕಾಲ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ ಭಾರತೀಯ ಧೂತಾವಾಸದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ‘ವಂದೇ ಮಾತರಂ’ ಪಾಠ ಶಾಲೆಯನ್ನು ಸ್ಥಾಪಿಸಿ ಕನ್ನಡ ಭಾಷಾ ಸಂಶೋಧಕರುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಡಾ.ಜಿ.ಬಿ.ಹರೀಶ ಅವರ ಕೃತಿ ಶ್ರೇಣಿಯಲ್ಲಿ ವೀರ ಸಾವರ್ಕರ್ ಅವರ ಹಿಂದುತ್ವ (ಅನುವಾದ), ಬೌದ್ಧ ಧರ್ಮದ ಸಂಕ್ಷಿಪ್ತ ಇತಿಹಾಸ, ಪಂಡಿತ್ ದೀನದಯಾಳ್ ಉಪಾಧ್ಯಾಯ ಸಮಗ್ರ ಬರಹಗಳು ಭಾಷಣಗಳು 1 ರಿಂದ 8 ಸಂಪುಟಗಳು, ಮಹಮ್ಮದ್ ಅಲಿ ಜಿನ್ನಾ, ಸ್ವಾಮಿ ವಿವೇಕಾನಂದ, ಭಗವಾನ್ ಬುದ್ಧನ ಧಮ್ಮಪದ ಸೇರಿದಂತೆ ಅನೇಕ ಕೃತಿಗಳಿವೆ.

ಸುಮಾರು 14 ಸಂಪುಟಗಳ ಸಾವರ್ಕರ್ ಸಮಗ್ರ ಬರವಣಿಗೆ ನಡೆಯುತ್ತಿದೆ. ಈಗಾಗಲೇ 6 ಸಂಪುಟಗಳು ಮುದ್ರಣವಾಗಿ ಓದುಗರನ್ನು ಸೇರಿದೆ. ಸಾವರ್ಕರ್ ಕುರಿತು ಇವರ ಕೆಲಸವನ್ನು ಗುರುತಿಸಿ ಸಾವರ್ಕರ್ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರು ರಾಜವಂಶಸ್ಥರು ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಶಸ್ತಿ ಪ್ರದಾನ ಮಾಡುವರು.ಮುಖ್ಯ ಅತಿಥಿಯಾಗಿ ಆದಿತ್ಯ ಅಧಿಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಶೇಖರ್ ಆಗಮಿಸುವರು, ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಶಸ್ವಿನಿ.ಎಸ್. ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.