ಮಾರ್ಚ್ 21 ರಿಂದ ಎಸ್.ಎಸ್ ಎಲ್.ಸಿ ಪರೀಕ್ಷೆ: ಅಗತ್ಯ ಕ್ರಮವಹಿಸಲು ಡಿಸಿ ಸೂಚನೆ

Spread the love

ಮೈಸೂರು: ಮಾರ್ಚ್ 21 ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ವ್ಯವಸ್ಥಿತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ಸಂಬಂಧ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಬೇಕು,ಯಾವುದೇ ಲೋಪದೋಷ ಆಗದಂತೆ ಕಾರ್ಯನಿರ್ವಹಿಸಬೇಕು, ಜಿಲ್ಲೆಯ ವ್ಯಾಪ್ತಿಯ 133 ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದ್ದು, ಪರೀಕ್ಷಾ ಕೇಂದ್ರದ 200 ಮೀ. ಸುತ್ತ ಸಾರ್ವಜನಿಕರು ಮತ್ತು ಪಾಲಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜೆರಾಕ್ಸ್‌ ಅಂಗಡಿಗಳನ್ನು ಕೂಡ ತೆರೆಯುವಂತಿಲ್ಲ’ ಎಂದು ಹೇಳಿದರು.

ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಪರೀಕ್ಷೆಗಳು ಕಟ್ಟನಿಟ್ಟಾಗಿ 133 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ 19,114 ಬಾಲಕರು ಹಾಗೂ 18,790 ಬಾಲಕಿಯರು ಸೇರಿದಂತೆ ಒಟ್ಟು 37,904 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಸರ್ಕಾರ ನೀಡುವ ಎಲ್ಲಾ ಆದೇಶಗಳನ್ನು ಪರಿಪಾಲನೆ ಮಾಡುವ ಮೂಲಕ ಪರೀಕ್ಷೆ ಸುವ್ಯವಸ್ಥೆ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಸೂಚಿಸಿದರು.

ಪರೀಕ್ಷಾ ಕೇಂದ್ರಗಳು:
ಜಿಲ್ಲೆಯ ಹೆಚ್.ಡಿ.ಕೋಟೆ 12, ಹುಣಸೂರು 15, ಕೆ.ಆರ್.ನಗರ 11, ಮೈಸೂರು ಉತ್ತರ 19, ಮೈಸೂರು ದಕ್ಷಿಣ 15, ಮೈಸೂರು ಗ್ರಾಮಾಂತರ 18, ನಂಜನಗೂಡು 1, ಪಿರಿಯಾಪಟ್ಟಣ 12, ಟಿ.ನರಸೀಪುರ 13 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 133 ಪರೀಕ್ಷಾ ಕೇಂದ್ರಗಳಿವೆ.

ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸೂಕ್ತ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ, ಅಭ್ಯರ್ಥಿಗಳಿಗೆ ಅಗತ್ಯ ಅಸನದ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರು, ಶೌಚಾಲಯ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಹುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಡಿಸಿಪಿ ಮುತ್ತು ರಾಜ್, ಡಿಡಿಪಿಐ ಜವರೇಗೌಡ ಹಾಗೂ ಡಿಡಿಪಿಯು ಮರಿಸ್ವಾಮಿ ಹಾಗೂ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.