ಮೈಸೂರು: ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ ಬೆಲೆಯೂ ಇಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಯದುವೀರ್, ಪ್ರತಿ ವಾರವೂ ಕೂಲಿ ಕಾರ್ಮಿಕರಿಗೆ ಸಂಬಳ ಹೋಗಲಿದೆ. ಹಿಂದೆ ಕಾಮಗಾರಿ ಬಳಿಕ ಕೊಡುತ್ತಿದ್ದರು. ಈಗ ಅದು ಬದಲಾಗಿದೆ ಎಂದು ಹೇಳಿದರು.
ಕೃಷಿ ಚಟುವಟಿಕೆ ಸಂದರ್ಭದಲ್ಲಿ ಮೈದಾನದ ಕೆಲಸ ಬಿಟ್ಟು ಹೋಗಬಹುದು. ಜತೆಗೆ ತಂತ್ರಜ್ಞಾನಕ್ಕೆ ಅನುಗುಣವಾಗಿ ಮಸೂದೆಯನ್ನು ಅನುಷ್ಠಾನ ಮಾಡಿದ್ದಾರೆ. ಇದರಿಂದ ಅನೂಕೂಲ ಆಗಲಿದೆ. ಕಾಂಗ್ರೆಸ್ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನಮ್ಮ ಕಾಲಕ್ಕೆ ಏನೂ ಮಾಡಬೇಕೋ ಅದನ್ನು ಮಾಡಿದ್ದೇವೆ. ಇದು ಹೊಸ ಯೋಜನೆ, ಹೊಸ ಭಾರತಕ್ಕೆ ಅನೂಕೂಲವಾಗುವ ಮಸೂದೆಯಾಗಿದೆ ಎಂದು ಸಮರ್ಥಿಸಿದರು.
ಮಹಾತ್ಮ ಗಾಂಧಿ ಎಲ್ಲರ ಹೃದಯದಲ್ಲೂ ಸದಾ ಇರುವ ವ್ಯಕ್ತಿಯಾಗಿದ್ದಾರೆ. ಎಲ್ಲಾ ಕೆಲಸದಲ್ಲಿಯೂ ಅವರ ಆದರ್ಶಗಳು ಇವೆ ಎಂಬುದು ನಮ್ಮ ನಂಬಿಕೆಯಾಗಿದೆ. ಪಿಎಂ ಆವಾಸ್, ಜಲಜೀವವ್ ನಲ್ಲಿ ಅವರ ಆದರ್ಶಗಳಿವೆ. ಪಿಎಂ ಮುದ್ರಾ ಯೋಜನೆ ಸೇರಿ ಅನೇಕ ಯೋಜನೆಗಳಲ್ಲಿ ಅವರ ಆದರ್ಶಗಳಿವೆ.
ವಿಕಸಿತ ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿರಂತರ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ಅದರಲ್ಲೂ ಕುಶಾಲನಗರ ಹೆದ್ದಾರಿ ಮಾಡಲು ಏನೆಲ್ಲಾ ಅನುಮತಿ ಬೇಕೋ ಎಲ್ಲವನ್ನೂ ಮಾಡಲಾಗಿದೆ ಎಂದು ತಿಳಿಸಿದರು.
ಮಾರ್ಚ್ ೨೦೨೭ರೊಳಗೆ ರಸ್ತೆ ಪೂರ್ಣಗೊಳಿಸಲಿದ್ದೇವೆ. ಒಂದೆರಡು ವಾರಗಳಲ್ಲಿ ಕೇಂದ್ರಕ್ಕೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವ ಮೂಲಕ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ಚುರುಕಾಗಲಿದೆ ಎಂದು ಯದುವೀರ್ ಒಡೆಯರ್ ಮಾಹಿತಿ ನೀಡಿದರು.
ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್ )ನಲ್ಲಿರುವ ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥಾನವನ್ನು ಪ್ರತ್ಯೇಕಗೊಳಿಸಿ ಅಭಿವೃದ್ಧಿ ಮಾಡುವ ಬಗ್ಗೆಯೂ ಕ್ರಮವಹಿಸಲಾಗಿದೆ ಎಂದು ಪ್ರಶ್ನೆ ಯೊಂದಕ್ಕೆ ಸಂಸದರು ಉತ್ತರಿಸಿದರು.
ಮೈಸೂರಿನಲ್ಲಿಯೂ ಇಕೋ ಟೂರಿಸಂ ಜೋನ್ ಅಡಿ ಮೃಗಾಲಯದ ಸಮೀಪದ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ತಂದಿದ್ದೇವೆ. ಟಾಂಗಾ ಮೂಲಕ ಮೈಸೂರನ್ನು ನೋಡುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತು ಸಂಗ್ರಹಾಲಯ ಮಾಡುವುದಕ್ಕೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾಗಿದೆ; ಕಾಂಗ್ರೆಸ್ ಆರೋಪಕ್ಕೆ ಬೆಲೆ ಇಲ್ಲ-ಯದುವೀರ್