ಮಣಿಪುರ ಉದ್ವಿಗ್ನ:ಕರ್ಫ್ಯೂ ಜಾರಿ

ಇಂಫಾಲ: ಕೆಲವು ದಿನಗಳಿಂದ ತಣ್ಣಗಾಗಿದ್ದ ಮಣಿಪುರದ ಹಲವು ಜಿಲ್ಲೆಗಳಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಕೆಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಶನಿವಾರ ರಾತ್ರಿ ಮೈತೆಯಿ ಸಂಘಟನೆ ಅರಾಂಬೈ ಟೆಂಗೋಲ್ ನಾಯಕ ಮತ್ತಿತರ ಸದಸ್ಯರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಉದ್ವಿಗ್ನ ಪರಿಸ್ಥಿತಿ ‌ಉಂಟಾಗಿದ್ದು ಅದು ಭಾನುವಾರ ಕೂಡಾ ಮುಂದುವರಿದಿದೆ.

ಪ್ರತಿಭಟನಾನಿರತರು ರಸ್ತೆ ಮಧ್ಯೆ ಟೈರ್‌ಗಳು ಹಾಗೂ ಬಸ್ ಗಳಿಗೂ ಬೆಂಕಿ‌ಹಚ್ಚಿ, ಹಳೆಯ ಪೀಠೋಪಕರಣಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ವಿಮಾನ ನಿಲ್ದಾಣದ ಪ್ರವೇಶದ್ವಾರಕ್ಕೆ ಘೇರಾವ್ ಹಾಕಿ, ನಾಯಕನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭದ್ರತಾ ಪಡೆಗಳೊಂದಿಗೆ ಸಂಘರ್ಷ ನಡೆಸಿದ್ದಾರೆ.

ಅವರಲ್ಲಿ ಕೆಲವರು ಇಂಫಾಲದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕೂಡಾ ನಡೆದಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ.

ಭದ್ರತಾ ಪಡೆಗಳ ಲಾಠಿ ಚಾರ್ಜ್‌ನಿಂದಾಗಿ ಪ್ರತಿಭಟನಾಕಾರನೊಬ್ಬ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಪರಿಸ್ಥಿತಿಯನ್ನು ಹತೋಟಿಗೆ ತರಲು ಉದ್ವಿಗ್ನ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಜಭವನಕ್ಕೆ ಹೋಗುವ ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬಿಷ್ಣುಪುರ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.