ಮಂಗಳೂರು: ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ,ಇದು ಸರ್ವರ ಸಂಭ್ರಮ, ನಮ್ಮ ದೇಶ ಬಹುತ್ವದ ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ,ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಸಿಎಂ ತಿಳಿಸಿದರು.
ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಸುಪ್ರೀಂಕೋರ್ಟ್ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ಎಂದು ಹೇಳಿದರು.
ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರ ಬೇಡಿಕೆಯಂತೆ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರು ಸ್ಪೀಕರ್ ಆಗುವ ಮೂಲಕ ಪ್ರೋಟೋಕಾಲ್ ಪ್ರಕಾರ ನನಗಿಂತ ಎತ್ತರದಲ್ಲಿದ್ದಾರೆ. ಮುಂದೆ ಇದಕ್ಕಿಂತ ಒಳ್ಳೆಯ ಅವಕಾಶಗಳು ಸಿಗಬಹುದು. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದು ಹೇಳಿದರು.
ಯು.ಟಿ.ಖಾದರ್ ಅವರು ಸ್ಪೀಕರ್ ಆದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿಯಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅಷ್ಟೊಂದು ಪ್ರೀತಿ ಇದೆ ಖಾದರ್ ಅವರಿಗೆ ಎಂದು ಮುಖ್ಯ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್ ಹಾಗೂ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.