ಮನೆ- ಮನೆಗೆ ಪೊಲೀಸ್ ಯೋಜನೆ: ನೀತಿಪಾಠದ ವೇಳೆ ಎಚ್ಚರಿಕೆ ಕೊಟ್ಟ ಎಸ್ಪಿ ಕವಿತಾ

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮ

ಚಾಮರಾಜನಗರ: ಚಾಮರಾಜನಗರ ಉಪ ವಿಭಾಗದ ಆರಕ್ಷಕರಿಗೆ ಮನೆ,ಮನೆಗೆ ಪೊಲೀಸ್ ಯೋಜನೆ ಬಗ್ಗೆ ತರಬೇತಿ ಕಾರ್ಯಾಗಾರ ಮಾಡಿ ನೀತಿ ಪಾಠದ ಜೊತೆಗೆ ಲೋಪವೆಸಗಿದರೆ ಕ್ರಮದ ಬಗ್ಗೆ ಖಡಕ್ ವಾರ್ನಿಂಗ್ ನೀಡಿದರು ಎಸ್ ಪಿ ಬಿ.ಟಿ.ಕವಿತ.

ಪಟ್ಟಣದ ಜೆ.ಎಚ್ ಪಟೇಲ್ ಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ
ಯೋಜನೆ ಬಗ್ಗೆ ಸಮಪರ್ಕವಾಗಿ ಅಲ್ಲಿರುವ ಅಂಶಗಳ ಪರಿಣಾಮಕಾರಿ ಜಾರಿಯಾಗಲು ಅನುಷ್ಟಾನಗೊಳಿಸಲು ಸಿಬ್ಬಂದಿಗಳು, ಅದಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.

ಸಾರ್ವಜನಿಕರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಇಲಾಖೆ ಸೂಚಿಸಿದ ಸಲಹೆ ಮಾರ್ಗದರ್ಶನ ಹೊರತು ಪಡಿಸಿ ಇತರ ಖಾಸಗಿ ವಿಚಾರದಲ್ಲಿ ಮೂಗುತೂರಿಸ ಬಾರದು ಹಾಗೂ ಸಾರ್ವಜನಿಕರು ಕೂಡ ಇಲಾಖೆಯೊಂದಿಗೆ ಕೈ ಜೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರಿಗೆ ಹತ್ತಿರವಾಗಲು ರಾಜ್ಯ ಪೊಲೀಸರು ಕೈಗೊಂಡಿರುವ ಮನೆ ಮನೆಗೇ ಪೊಲೀಸ್ ಯೋಜನೆಯ ಅನುಷ್ಠಾನದ ಕುರಿತು ಪೊಲೀಸ್ ಪಡೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲು‌ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಸ್ಪಿಗಳು ಸೂಕ್ತ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡಿದರು.

ಕಾರ್ಯಕ್ರಮ ಆರಂಭವಾಗುವ ಮುನ್ನವೆ ಸೂಚಿಸಿದ ಬೀಟ್ ಸಿಬ್ಬಂದಿಗಳು ಹಾಜರಿರುವ ಸಂಖ್ಯೆ ನೋಡಿ ಕೋಪಗೊಂಡು ಠಾಣಾದಿಕಾರಿಗಳ ಮೇಲೆ ಎಸ್ ಪಿ ಗರಂ ಆದರು.

ಜೊತೆಗೆ ಬರದೆ ಇದ್ದವರ ಸಕಾರಣಗಳನ್ನ ಕೇಳಿ ಇಲಾಖಾ ಕ್ರಮದ ಬಗ್ಗೆ ವಾರ್ನಿಂಗ್ ಕೊಟ್ಟು ಇದರ ಮದ್ಯೆ ನೀತಿ ಪಾಠ ಮಾಡಿದರು.

ಮನೆ ಮನೆಗೇ ಪೊಲೀಸ್’ ಎಂದರೆ ಪ್ರತಿ ಮನೆಗೆ ಪೊಲೀಸ್’ ಎಂದರ್ಥ.ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಅಪರಾಧವನ್ನು ತಡೆಗಟ್ಟುವುದು ಮಾತ್ರವಲ್ಲದೆ, ನಿರ್ಭೀತ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸಾರ್ವಜನಿಕ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರು ಈಗಾಗಲೇ ಉದ್ಘಾಟಿಸಿರುವ ಮನೆ ಮನೆಗೆ ಪೊಲೀಸ್’ ನ ಉದ್ದೇಶ, ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿ ಮತ್ತು ಕ್ರಿಯಾಶೀಲ ಪಡೆಯನ್ನಾಗಿ ಪರಿವರ್ತಿಸುವುದಾಗಿದೆ.

ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ‘ಮನೆ ಮನೆಗೇ ಪೊಲೀಸ್’ ಪರಿಕಲ್ಪನೆ ಬೀಟ್ ಪೊಲೀಸರು ಮನೆಗಳಿಗೆ ಭೇಟಿ ನೀಡುವುದು, ಜನರೊಂದಿಗೆ ಸಂವಹನ ನಡೆಸುವುದು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದನ್ನು ಇದು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಈ ಉಪಕ್ರಮದ ಪರಿಣಾಮಕಾರಿ ಅನುಷ್ಠಾನದ ಕುರಿತು ಪೊಲೀಸ್ ಪಡೆಗೆ ತರಬೇತಿ ನೀಡಲಾಯಿತು.

ನಾಗರಿಕರ ಸಮಸ್ಯೆ, ಸಲಹೆ, ದೂರು ಆಲಿಸಲು ಪೊಲೀಸ್‌ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ–ಮನೆಗೆ ಪೊಲೀಸ್‌’ ಕಾರ್ಯಕ್ರಮವನ್ನು ಇಲಾಖೆ ಜಾರಿಗೊಳಿಸಿದೆ

ಪ್ರಸ್ತುತ ಪೊಲೀಸ್‌ ವ್ಯವಸ್ಥೆಯು ಬಹುತೇಕವಾಗಿ ‘ಪ್ರತಿಕ್ರಿಯೆ ಸೇವೆ’ಯನ್ನು ಮಾತ್ರವೇ ಇಲ್ಲಿಯವರೆಗೆ ಒದಗಿಸುತ್ತಿತ್ತು. ಅಂದರೆ, ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಪ್ರತಿಕ್ರಿಯಿಸುತ್ತಿತ್ತು. ಈ ವ್ಯವಸ್ಥೆಯನ್ನು ‘ಸಕ್ರಿಯ ಸೇವೆ’ಯಾಗಿಸಿ (ಪ್ರೊ ಆ್ಯಕ್ಟಿವ್‌ ಪೊಲೀಸಿಂಗ್‌) ಜನಸ್ನೇಹಿಯನ್ನಾಗಿಸುವತ್ತ ಹೆಜ್ಜೆ ಇಡಲಾಗಿದೆ.

ಜನರು ಮತ್ತು ಪೊಲೀಸರ ನಡುವೆ ನಿಕಟ ಸಂಬಂಧ ಏರ್ಪಟ್ಟು, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿಸುವ ಕಾರ್ಯಕ್ರಮ ಇದಾಗಿದೆ ಎಂದು ಎಸ್ಪಿ ಬಿ.ಟಿ ಕವಿತಾ ಅವರು ಹೇಳಿದರು‌.

ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಪೊಲೀಸ್‌ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿಕೊಳ್ಳುವುದು (ಇ–ಬೀಟ್‌ ವ್ಯವಸ್ಥೆ ಅನ್ವಯ) ಮತ್ತು ಮನೆಗಳನ್ನು ಪಟ್ಟಿ ಮಾಡಿಕೊಳ್ಳುವುದು. ನಂತರ ಆ 40–50 ಮನೆಗಳ ಸಮೂಹವನ್ನು ರಚಿಸಿಕೊಂಡು, ಬೀಟ್‌ ಪೊಲೀಸ್‌ ಸಿಬ್ಬಂದಿ ಎಲ್ಲ ಮನೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ.

ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್‌ ಠಾಣೆ ಮತ್ತು ಪೊಲೀಸ್‌ ಅಧಿಕಾರಿಗಳ ದೂರವಾಣಿ ಸಂಖ್ಯೆ, ನಿಯಂತ್ರಣ ಕೊಠಡಿ 112 ಸಂಖ್ಯೆ ನೀಡಿ, ಎಂತಹದ್ದೇ ಪರಿಸ್ಥಿತಿಯಲ್ಲಿ ಪೊಲೀಸ್‌ ಇಲಾಖೆಗೆ ಕರೆ ಮಾಡುವಂತೆ ಉತ್ತೇಜಿಸಬೇಕು ಎಂದು ಬೀಟ್ ಬಗ್ಗೆ ಚಾ.ನಗರ ಉಪವಿಭಾಗದ ಉಪಾದೀಕ್ಷ ಲಕ್ಷ್ಮಯ್ಯ ಅವರು ಸೂಚಿಸಿದರು.

ಠಾಣಾಧಿಕಾರಿಗಳು ತಮ್ಮ ಬೀಟ್‌ ಅಧಿಕಾರಿ ಮತ್ತು ಸಿಬ್ಬಂದಿ ಸಂವಹಿಸುವ ಸಾರ್ವಜನಿಕ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಪರಿಹಾರ ಒದಗಿಸಲು ಸ್ಥಳಕ್ಕೆ ಭೇಟಿ ನೀಡಬೇಕು. ಬೇರೆ ಇಲಾಖೆಗೆ ಸಂಬಂಧಿಸಿದ ಅಹವಾಲು ಇದ್ದರೆ, ಆಯಾಯ ಇಲಾಖೆಗೆ ಕಳುಹಿಸುವಂತೆ ಸೂಚಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಮನೆಯ ನಿವಾಸಿಗಳನ್ನು ಕೋರುವುದು ಹಾಗೂ ಸ್ಥಳೀಯ ಪೌರಾಡಳಿತ ಇಲಾಖೆ ವತಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಲು ಕ್ರಮವಹಿಸಬೇಕು. ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮಾನವ ಕಳ್ಳಸಾಗಾಣಿಕೆ, ಮಕ್ಕಳ ಭಿಕ್ಷಾಟನೆ, ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಸೇರಿದಂತೆ ಸಾಮಾಜಿಕ ಪಿಡುಗುಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕು ಎಂದು ಪೊಲೀಸ್‌ ಮಹಾನಿರ್ದೇಶಕರು ನಿರ್ದೇಶನ ನೀಡಿದ್ದಾರೆ. ಅದರಂತೆ ಸೆನ್ ಠಾಣೆ ಡಿವೈಸ್ಪಿ ಪವನ್ ಕುಮಾರ್ ಆನ್ ಲೈನ್ ಮೋಸ, ಮೋಸಹೋದವರು ಬಗ್ಗೆ ಮಾಹಿತಿ ಸಮೇತ ಸಿಬ್ಬಂದಿಗಳಿಗೆ ಅರಿವು ಮೂಡಿಸಿದರು

ಪ್ರಶಸ್ತಿ ಪ್ರದಾನ: ಪ್ರತಿ ತಿಂಗಳ ಎರಡನೇ ಶನಿವಾರ ಠಾಣಾ ವ್ಯಾಪ್ತಿಯ ಎಲ್ಲ ಮನೆಗಳ ಸಮೂಹದ ಮುಖ್ಯಸ್ಥರು ಹಾಗೂ ಇತರೆ ನಾಗರಿಕರೊಂದಿಗೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಬೇಕು. ಅತ್ಯುತ್ತಮ ಸಲಹೆ ನೀಡುವ, ಉತ್ತಮ, ಚತುರರಾಗಿ ಮಾಹಿತಿ ನೀಡುವ ಹಾಗೂ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನದಂದು ‘ಅತ್ಯುತ್ತಮ ಪೊಲೀಸ್‌ ಸಲಹೆಗಾರರು’ ಮತ್ತು ‘ಅತ್ಯುತ್ತಮ ಪೊಲೀಸ್‌ ಸ್ನೇಹಿತರು’ ಎಂಬ ಪ್ರಶಸ್ತಿಗಳನ್ನು ಪ್ರದಾನ ಮಾಡುವಂತೆ ಡಿಜಿಪಿ ಸೂಚಿಸಿದ್ದಾರೆ.

‘ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಗರಿಷ್ಠ ಒತ್ತು ನೀಡಬೇಕು. ಒಂಟಿ ಮಹಿಳೆಯರು ಏಕಾಂಗಿ ಹಿರಿಯ ನಾಗರಿಕರು ವಿಶೇಷ ಚೇತನರು ಅನಾರೋಗ್ಯಪೀಡಿತ ವ್ಯಕ್ತಿಗಳಿಗೆ ಹೆಚ್ಚಿನ ಬೆಂಬಲ ಸಹಾಯದ ಅವಶ್ಯ ಇರುತ್ತದೆ. ಇಂಥವರು ವಾಸಿಸುವ ಮನೆಗಳಿಗೆ ಪೊಲೀಸ್‌ ಸಿಬ್ಬಂದಿ ಸಾಧ್ಯವಾದಷ್ಟು ನಿತ್ಯ ಭೇಟಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ಭಯವಾಗಿ ವಾಸಿಸುವ ವಾತಾವರಣ ಕಲ್ಪಿಸಬೇಕು ಎಂದು ಬೀಟ್‌ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದಾರೆ.

‘ಮನೆ–ಮನೆಗಳಲ್ಲಿ ಸ್ವೀಕೃತವಾಗುವ ಎಲ್ಲ ಅಹವಾಲು ಅಥವಾ ದೂರುಗಳ ಪಟ್ಟಿಯನ್ನು ಒಂದು ರಿಜಿಸ್ಟರ್‌ನಲ್ಲಿ ದಾಖಲು ಮಾಡಬೇಕು. ಅಹವಾಲುಗಳ ವಿವರ ದೂರುದಾರರ ಹೆಸರು ಸಂಪರ್ಕ ಸಂಖ್ಯೆ ವಿಳಾಸ ಕೈಗೊಂಡ ಕ್ರಮಗಳು ಒದಗಿಸಲಾದ ಪರಿಹಾರ ಮುಂತಾದ ಮಾಹಿತಿಯನ್ನು ನಮೂದಿಸಬೇಕು. ನಂತರ ಕ್ರೋಡೀಕೃತ ಅಂಕಿಅಂಶಗಳ ಮಾಹಿತಿಯನ್ನು ಪೊಲೀಸ್‌ ಅಧೀಕ್ಷಕರಿಗೆ ಸಲ್ಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.