ಮಂಡ್ಯ: ಓದಿ ವಿದ್ಯಾವಂತಳಾಗಿ ತಂದೆ,ತಾಯಿಯನ್ನು ನೋಡಿಕೊಳ್ಳಬೇಕಾದ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕ್ಕರೆ ನಾಡು ಮಂಡ್ಯಾದಲ್ಲಿ ನಡೆದಿದೆ.
ಈ ಘಟನೆ ಮಂಡ್ಯ ಜಿಲ್ಲೆಯ ಬಂದೀಗೌಡ ಬಡಾವಣೆಯಲ್ಲಿ ನಡೆದಿದ್ದು,
ಸುಹಾನಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಅನ್ಸರ್ ಪಾಷಾ ಅವರ ಮಗಳು ಸುಹಾನಾ (19) ಎಂದು ಗುರುತಿಸಲಾಗಿದೆ.
ಈಕೆ ಮೈಸೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದಾಳೆ. ಬಂದ ಕೂಡಲೇ ಸ್ಕೂಟಿ ತೆಗೆದುಕೊಂಡು ಹೋದವಳು ನೇರವಾಗಿ ರೈಲ್ವೆ ಹಳಿ ಬಂದು ಸ್ಕೂಟಿ ನಿಲ್ಲಿಸಿ, ರೈಲು ಹಳಿ ಬಳಿ ತೆರಳಿ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸುಹಾನಾ ರೈಲು ಹಳಿ ಬಳಿ ಸ್ಕೂಟಿ ನಿಲ್ಲಿಸಿ, ಹಳಿಯತ್ತ ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಕೆಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.