ಸೈನಿಕರ ಸಾಹಸಕ್ಕೆ ಮಂಜೇಗೌಡನ ಕೊಪ್ಪಲು ರವಿ ಸಲಾಂ

Spread the love

ಮೈಸೂರು: ಪಾಪಿ ಪಾಕಿಸ್ತಾನ ನೆಲದಲ್ಲಿದ್ದ ಭಯೋತ್ಪಾದಕ ತಾಣಗಳ ಮೇಲೆ ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಿ ಸಂಪೂರ್ಣವಾಗಿ ನಾಶಪಡಿಸಿದ ಭಾರತೀಯ ವೀರ ಯೋಧರಿಗೆ ನನ್ನ ಬಿಗ್ ಸೆಲ್ಯೂಟ್ ಎಂದು ಕಾಂಗ್ರೆಸ್ ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ಮಂಜೇಗೌಡನ ಕೊಪ್ಪಲು ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಸಿಂಧೂರ ಎಂಬ ಹೆಸರಿನ ಸೇನಾ ಕಾರ್ಯಾಚರಣೆ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ನಮ್ಮ ದೇಶದ ಕಿರೀಟ ಎಂದೇ ಕರೆಯಲಾಗುವ ಕಾಶ್ಮೀರದ ಪಹಲ್ಗಾಮ್ ಪ್ರವಾಸಕ್ಕೆ ತೆರಳಿದ 26 ಅಮಾಯಕ ಭಾರತೀಯರನ್ನು ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಸುಮಾರು 9 ಉಗ್ರ ನೆಲೆಗಳನ್ನು ಭಸ್ಮ ಮಾಡಿದ್ದಲ್ಲದೆ ಅದರಲ್ಲಿದ್ದ ವಿಶ್ವಘಾತುಕರನ್ನು ಮಟ್ಟ ಹಾಕಿದ್ದು ಶ್ಲಾಘನೀಯ ಕಾರ್ಯ ಎಂದಿದ್ದಾರೆ.

ಪಹಲ್ಗಾಮ್ ದಾಳಿ ಆದಾಗಿನಿಂದ ಪ್ರತೀಕಾರಕ್ಕಾಗಿ ನಾನು ಸೇರಿ ಇಡೀ ಭಾರತೀಯ ನಾಗರಿಕರು ಕಾದು ನೋಡುತ್ತಿದ್ದರು.

ನಮ್ಮ ಸೈನಿಕರು ಬುಧವಾರ ನಡೆಸಿದ ಮಿಡ್ ನೈಟ್ ಆಪರೇಷನ್ ನೆಮ್ಮದಿ ತಂದಿದೆ. ದೇಶದ ಸುಭದ್ರತೆಯೇ ತಮ್ಮ ಸರ್ವಸ್ವ ಎಂದುಕೊಂಡಿರುವ ನಮ್ಮ ಸೈನಿಕರ ಹೋರಾಟ 140 ಕೋಟಿ ಭಾರತೀಯರನ್ನು ಗೆಲ್ಲುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ದೇಶ ದಿವಾಳಿಯಾದರೂ ಪಾಪಿ ಪಾಕಿಸ್ತಾನಕ್ಕೆ ಬುದ್ದಿ ಬರುತ್ತಿಲ್ಲ. ಸಮಾಜ ಘಾತುಕ ಶಕ್ತಿಗಳನ್ನು ಪೋಷಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ತನ್ನ ನರಿ ಬುದ್ದಿಯನ್ನು ಹೀಗೆ ಮುಂದುವರೆಸಿದ್ದಲ್ಲಿ ಮುಂದೊಂದು ದಿನ ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನ ರಾಷ್ಟ್ರ ಇಲ್ಲದಂತೆ ಮಾಡುವ ತಾಕತ್ತು ನಮ್ಮ ಸೈನ್ಯಕ್ಕಿದೆ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.