ಮಾಂಬಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ;ಅದ್ದೂರಿಯಾಗಿ ಮೆರವಣಿಗೆ: ಸಚಿವ ಮಹದೇವಪ್ಪ ಭಾಗಿ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ಸಮೀಪದ ಮಾಂಬಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಜಯಂತೋತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ ಹೆಚ್.ಸಿ.ಮಹದೇವಪ್ಪ, ಶಾಸಕ ಎ.ಆರ್. ಕೃಷ್ಣಮೂರ್ತಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ ಹೆಚ್.ಸಿ.ಮಹದೇವಪ್ಪರವರು, ಮಾಂಬಳ್ಳಿ ಗ್ರಾಮ ದಿವಂಗತ ಸಿದ್ದಮಾದಯ್ಯ, ಕೆಂಪಮ್ಮ, ಬಿ ಬಸವಯ್ಯ, ಎಸ್ ಜಯಣ್ಣ

ಸೇರಿದಂತೆ ಇನ್ನಿತರ ಶಾಸಕರನ್ನು ಕೊಟ್ಟ ಗ್ರಾಮ ಎಂದು ಸ್ಮರಿಸಿದರು

.

ಈ ಗ್ರಾಮದ ಬಹುತೇಕರು ಸಿಲ್ಕ್ ಫಿಲೇಚರ್ ಗಳನ್ನು ಅವಲಂಬಿಸಿದ್ದಾರೆ. ಸಿಲ್ಕ್ ರೀಲರ್ ಗಳ ಸಂಘದಲ್ಲಿ ಸುಮಾರು ಒಂದು ಸಾವಿರ ಸದಸ್ಯರಿದ್ದು 700 ರಿಂದ 800 ಮಂದಿ ಪ.ಜಾತಿ, ಪ.ಪಂಗಡದವರೇ ಇದ್ದಾರೆ. ಇಲ್ಲಿ ರೇಷ್ಮೆ ಕಾರ್ಖಾನೆ ಪುನರಾರಂಭಿಸಿದರೆ, 7,000 ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲಿವೆ, ಸಿಲ್ಕ್ ರೀಲರ್ ಗಳಿಗೆ ನೀಡಲು15 ಕೋಟಿ ರೂ.ಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು, ಮಾಂಬಳ್ಳಿ, ಹನೂರು ಭಾಗದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಾಗಿ ಇರುವುದರಿಂದ ಅವರ ಅಭಿವೃದ್ಧಿಗಾಗಿ
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 3600 ಕೋಟಿ ರೂಗಳ ಯೋಜನೆಗಳನ್ನು ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಅನುದಾನದಲ್ಲಿ ಈ ಭಾಗದ ಜನರ ಅನುಕೂಲಕ್ಕಾಗಿ ಅಗತ್ಯ ಇರುವ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸುವರ್ಣವತಿ ಜಲಾಶಯ ಅಭಿವೃದ್ಧಿಯಾದರೆ 8000 ಎಕರೆ ನೀರಾವರಿಗೆ ಅನುಕೂಲವಾಗಲಿದೆ. ಈ ಭಾಗದ ಜನರಿಗೆ ನೀರು ಕೊಡುವ ಉದ್ದೇಶ ದಿಂದ ವಿಸ್ತ್ರುತ ವರದಿ ಸಿದ್ಧಪಡಿಸುಂತೆ ಶಾಸಕ ಎ.ಆರ್. ಕೃಷ್ಣ ಮೂರ್ತಿ ಅವರಿಗೆ ಹೇಳಿದ್ದೇನೆ.ಇದಲ್ಲದೆ 6 ದೊಡ್ಡ ಕರೆಗಳ ಅಭಿವೃದ್ಧಿಗೆ 50 ಕೋಟಿ ಮಂಜೂರು ಮಾಡಲಾಗಿದೆ. ಇದಕ್ಕೆಲ್ಲ ಮೂಲ ಪ್ರೇರಣೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಎಂದು ಹೇಳಿದರು.

ಪಾಕಿಸ್ತಾನ ನಮ್ಮ ಜನರನ್ನು ಕೊಂದು ಹಾಕಿದಾಗ ಎರಡು ದೇಶಗಳಲ್ಲೂ ಪ್ರಕ್ಷುಬ್ದತೆ ಉಂಟಾಗಿ ಭಾರತ ಯುದ್ದಕ್ಕೆ ನಿಂತಾಗ ಪಾಕಿಸ್ತಾನದವರು ರಾಜಿ ಸಂಧಾನಕ್ಕೆ ಬಂದರು. ಇಡೀ ದೇಶದ ಜನ ದೇಶಕ್ಕೆ ಆಪತ್ತು ಬಂದರೆ ಎಲ್ಲರೂ ಒಗ್ಗಟ್ಟಿನಿಂದ ಎದುರಿಸುತ್ತೇವೆ ಎಂದು ಅಂಬೇಡ್ಕರ್ ಅದಾಗಲೇ ಹೇಳಿದ್ದಾರೆ. ಅಂಬೇಡ್ಕರ್ ಅವರು ವೋಟಿನ ಹಕ್ಕು ನೀಡದಿದ್ದರೆ ನಾವೆಲ್ಲ ಈ ರೀತಿ ಇಲ್ಲಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ ನಾನು ಸಚಿವನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಾ.ಮಹದೇವಪ್ಪ ತಿಳಿಸಿದರು.

ಅಂಬೇಡ್ಕರ್ ನಮಗೆ ಸ್ಪೂರ್ತಿ ಏಕೆಂದರೆ ಅವರು ನಮಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಕ್ಕು ಹಾಗೂ ಸಮಾನತೆ ಕೊಡಿಸಲು ತ್ಯಾಗ ಹೋರಾಟ ಮಾಡಿದ್ದಾರೆ ಸಂವಿಧಾನದ ಪೀಠಿಕೆಯಲ್ಲಿ ಅವರು ಹೇಳಿದ್ದಾರೆ ಭಾರತದ ಪ್ರಜೆಗಳಾದ ನಾವೆಲ್ಲರೂ ಒಂದು ಎಂದು. ಆದರೆ ಅಂಬೇಡ್ಕರ್ ಸೋಲಲು ಹಿಂದೂ ಮಹಾಸಭಾ ಹಾಗೂ ಕಮ್ಯುನಿಸ್ಟ್ ಪಕ್ಷ ಕಾರಣ. 1952ರಲ್ಲಿ ಅಂಬೇಡ್ಕರ್ ಅವರೇ ಬರೆದಿದ್ದಾರೆ ನಾನು ಸೋಲಲು ಸಾವರ್ಕರ್ ಹಾಗೂ ಡಾಂಘೆ ಕಾರಣ ಎಂದು ಸ್ಮರಿಸಿದರು.

ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ನವರು ಜಾಗ ಕೊಡಲಿಲ್ಲ ಎಂಬುದು ರಾಜಕೀಯ ಪ್ರೇರಿತ ಮಾತು. ಅಂಬೇಡ್ಕರ್ ರವರ 70 ವರ್ಷಗಳ ಸಂವಿಧಾನವನ್ನು ನೂರಾರು ತಿದ್ದುಪಡಿ ಮಾಡಿದ್ದಾರೆ ಆದರೆ ಸಂವಿಧಾನದ ಮೂಲ ಆಶಯವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ಈ ಗ್ರಾಮಕ್ಕೆ ನಮ್ಮ ತಂದೆ ದಿ.ಬಿ.ರಾಚಯ್ಯರವರ ಕೊಡುಗೆ ಸಾಕಷ್ಟಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಇಲ್ಲಿಗೆ ಪ್ರೌಢಶಾಲೆಯನ್ನು ಆರೋಗ್ಯ ಸಚಿವರಾಗಿದ್ದಾಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ರೇಷ್ಮೆ ಸಚಿವರಾಗಿದ್ದ ವೇಳೆ ಸಿಲ್ಕ್ ಫಿಲೇಚರ್ ಅನ್ನು ಮಂಜೂರು ಮಾಡಿಸಿಕೊಟ್ಟಿದ್ದರು ಎಂದು ಹೇಳಿದರು.

ಕೊಳ್ಳೇಗಾಲ ಭೀಮನಗರದ ಅಂಬೇಡ್ಕರ್ ಭವನ 20.ವರ್ಷಗಳ ವನವಾಸ ವಾದರೂ ಇನ್ನೂ ಪರಿಪೂರ್ಣ ವಾಗಿಲ್ಲ. ಏಕೆಂದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ, ಇಂದು ನಾನೇ ಮಹದೇವಪ್ಪ ರವರನ್ನೇ ಖುದ್ದಾಗಿ ಅಂಬೇಡ್ಕರ್ ಭವನಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಅಂಬೇಡ್ಕರ್ ಸಂಘದ ಪದಾಧಿಕಾರಿಗಳನ್ನು ಹಾಗೂ ಯಜಮಾನರುಗಳನ್ನು ಭೇಟಿ ಮಾಡಿಸಿ ಮಾತುಕತೆ ನಡೆಸಿದ್ದೇನೆ. ಈ ವೇಳೆ ಸಚಿವರು ಭವನ ಪೂರ್ಣ ಗೊಳಿಸಲು 3 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.ಡಾ.ಹೆಚ್.ಸಿ.ಮಹದೇವಪ್ಪ, ಅವರು ಯಾವ ಯಾವ ಖಾತೆಗಳನ್ನು ವಹಿಸಿ ಕೊಂಡಿದ್ದರೋ ಅಲ್ಲೆಲ್ಲ ಪರಿಪೂರ್ಣವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಗುಣಗಾನ ಮಾಡಿದರು.

ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿರವರು ಮಾತನಾಡಿ ‌ಅಂಬೇಡ್ಕರ್ ಅವರ ಬಗ್ಗೆ ಸುದೀರ್ಘವಾಗಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಧರ್ಮೇಂದ್ರ, ಮುಖಂಡರುಗಳಾದ ಬಸವರಾಜು, ಮಹಾದೇವು, ಪುರುಷೋತ್ತಮ್ ದಾಸ್ ಶಿವಪ್ರಕಾಶ್ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.