ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಮಲ್ಲಿಕಾರ್ಜುನ ಖರ್ಗೆ

Spread the love

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಸಚಿವರಾದ ಪ್ರಿಯಾಂಕ್ ಖರ್ಗೆಯವರ ಜೊತೆ ಸಿಎಂ ನಿವಾಸಕ್ಕೆ ಆಗಮಿಸಿ, ಅವರ ಆರೋಗ್ಯ ವಿಚಾರಿಸಿದರು.

ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳಿಂದ ಕಾಲು ಮತ್ತು ಮಂಡಿ ನೋವಿನಿಂದ ಬಳಲುತ್ತಿದ್ದಾರೆ,ಕೆಲವೆಡೆ ವ್ಹೀಲ್ ಚೇರ್ ನಲ್ಲಿ ಓಡಾಡಿದ್ದೂ ಇದೆ.

ಹಾಗಾಗಿ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರ ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ ಜತೆ ಸಿಎಂ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಆದಷ್ಟು ಶೀಘ್ರ ಮಂಡಿನೋವಿನಿಂದ ಗುಣಮುಖರಾಗುವಂತೆ ಹಾರೈಸಿದರು.

ಇದಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ
ನನ್ನ ಮೇಲಿನ ವಿಶ್ವಾಸ,ಕಾಳಜಿಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಆರೋಗ್ಯ ವಿಚಾರಿಸಲಷ್ಟೇ ಬಂದಿದ್ದರು,ಬೇರೆ ಯಾವುದೇ ವಿಷಯ ಚರ್ಚಿಸಲಿಲ್ಲ ಎಂದು ಹೇಳಿದರು.

ಇತ್ತ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಸಿದ್ದರಾಮಯ್ಯ ಅವರಿಗೆ ಹೆಚ್ಚು ಓಡಾಡಲು ಆಗುತ್ತಿಲ್ಲ,ಕಾಲು ನೋವಿದೆ ಹಾಗಾಗಿ ಆರೋಗ್ಯ ವಿಚಾರಿಸಿದ್ದೇನೆ ಎಂದು ತಿಳಿಸಿದರು.

ಹನಿಟ್ರ್ಯಾಪ್ ಮತ್ತಿತರ ವಿಷಯಗಳ ಬಗ್ಗೆ ಪ್ರಸ್ತಾಪವಾಯಿತೆ ಎಂಬ ಮಾಧ್ಯಮದವರ ಪ್ರಶ್ನೆಗೆ ನಾವು ಯಾವುದರ ಬಗ್ಗೆಯೂ ಮಾತನಾಡಿಲ್ಲ ಎಂದು ಹೇಳಿದರು.

ಆದರೂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಜತೆ ಸುಮಾರು ಒಂದು ಗಂಟೆ ಮಾತನಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.