ಗಾಂಧಿ ವಿಚಾರಧಾರೆಗಳು,ಮೌಲ್ಯಗಳು ಜಗತ್ತಿಗೇ ಪ್ರಸ್ತುತ- ಸಿದ್ದರಾಮಯ್ಯ

Spread the love

ಬೆಂಗಳೂರು: ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗಾಂಧೀಜಿಯವರ ವಿಚಾರಧಾರೆಗಳು, ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ ಎಂದು ಹೇಳಿದರು.

ಹುತಾತ್ಮರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.

ಜನವರಿ 30, 1948 ರಂದು ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ದಿನ. ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು.

ಅವರ ಹೋರಾಟದ ಬದುಕು, ಅಹಿಂಸೆ, ಸತ್ಯಾಗ್ರಹ, ಇವು ನಮಗೆ ಪ್ರೇರಣೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸತ್ಯಾಗೃಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅವರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತು, ಬ್ರಿಟಿಷರ ದಾಸ್ಯದಿಂದ ಬಿಡುಗಡೆ ದೊರೆಯಿತು ಎಂದು ವಿವರಿಸಿದರು.

ಮಹಾತ್ಮಾ ಗಾಂಧಿ ಅವರು ಒಮ್ಮೆ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 25,26,27 ರಂದು 1924 ನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು.ಅದರ ಸವಿನೆನಪಿಗಾಗಿ ಬೆಳಗಾವಿಯಲ್ಲಿ ಶತಮಾನೋತ್ಸವವನ್ನು ಆಚರಿಸಲಾಯಿತು ಎಂದು ‌ಹೇಳಿದರು.

ಮಹಾತ್ಮಾ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಹೇಗಿರಬೇಕೆಂದು ಪರಿಹಾರಗಳನ್ನು ನೀಡಿದ್ದರು. ಭಾರತ ಗ್ರಾಮಗಳ ದೇಶ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಸ್ವರಾಜ್ಯ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು ಎಂದು ಸಿಎಂ ಸ್ಮರಿಸಿದರು.

ಗಾಂಧೀಜಿಯವರ ಭಾರತ ಕಟ್ಟುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು ಅವರ ಮೌಲ್ಯಗಳನ್ನು ರೂಢಿಸಿಕೊಂಡು ಅದರಂತೆ ನಡೆಯುವ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ತರಲು ಏರ್ ಆಂಬ್ಯುಲೆನ್ಸ್:
ಪ್ರಯಾಗ್ ರಾಜ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಮೃತ ಪಟ್ಟಿದ್ದು, ಮೃತ ದೇಹಗಳನ್ನು ರಾಜ್ಯಕ್ಕೆ ತರಲು ಏರ್ ಆಂಬ್ಯುಲೆನ್ಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮೃತ ಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ಘೋಷಿಸ ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಉತ್ತರಿಸಿದರು.