ಮೈಸೂರು: ಮೈಸೂರು ಅರಮನೆಯಲ್ಲಿ ಸಡಗರವೋ ಸಡಗರ,ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿರುವುದೇ ಈ ಸಡಗರಕ್ಕೆ ಕಾರಣ.
ಯದುವಂಶದ ಯವರಾಣಿ ತ್ರಿಷಿಕಾ ಅವರು ಮೈಸೂರಿನ ಯಾದವಗಿರಿಯಲ್ಲಿರುವ ಮದರ್ ಹುಡ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರಿನ ವೈದ್ಯರ ತಂಡ ಮೈಸೂರಿನ ವೈದ್ಯರ ತಂಡದ ನೆರವು ಪಡೆದು ಹೆರಿಗೆ ಪ್ರಕ್ರಿಯೆ ಯಶಸ್ವಿಗೊಳಿಸಿದ್ದಾರೆ.
ಆದ್ಯವೀರ್ ಗೆ ಸಹೋದರ ಪ್ರಾಪ್ತಿಯಾಗಿದೆ,ಒಂದೆಡೆ ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.ಮತ್ತೊಂದೆಡೆ ಮಗು ಜನಿಸಿದ ಸೂತಕ ಹಿನ್ನಲೆ ಪೂಜಾ ಕೈಂಕರ್ಯಗಳಿಗೆ ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ.ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ.ಈಗ ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.
ಇಂದು ನವರಾತ್ರಿ ಸಂಪನ್ನಗೊಳ್ಳಬೇಕಿದೆ,ಹಾಗಾಗಿ ಮುಂದಿನ ಪೂಜಾ ವಿಧಿವಿಧಾನಗಳನ್ನ ಮುಂದುವರೆಸುವ ಬಗ್ಗೆ ಅರಮನೆ ಪುರೋಹಿತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಮನೆ ಮೂಲಗಳು ತಿಳಿಸಿವೆ.