ಮಹರ್ಷಿ ವಾಲ್ಮೀಕಿ ಮೌಲ್ಯಗಳು ಸಾರ್ವಕಾಲಿಕ-ಪ್ರೊ.ರಾಜೇಶ್ವರಿ

Spread the love

ಮೈಸೂರು: ಮಹರ್ಷಿ ವಾಲ್ಮೀಕಿ ಅವರು ಪ್ರತಿಪಾದಿಸುವ ಮೌಲ್ಯಗಳು ಸಾರ್ವಕಾಲಿಕ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕಿ ಪ್ರೊ. ರಾಜೇಶ್ವರಿ ಜೆ ಅವರು ಅಭಿಪ್ರಾಯ ಪಟ್ಟರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿಮ್ನ ವರ್ಗದ ಸಾಮಾನ್ಯ
ಕುಟುಂಬದಲ್ಲಿ ಜನಿಸಿದ ವಾಲ್ಮೀಕಿ ಅವರು ಸನ್ಮಾರ್ಗ, ಸನ್ನಡತೆ ಮತ್ತು ಸದ್ಗುಣಗಳನ್ನು ಜನರಿಗೆ ತಿಳಿಸಿ ಸತ್ ಸಮಾಜ ನಿರ್ಮಾಣ ಮಾಡಲು ಬುನಾದಿ ಹಾಕಿದರು ಎಂದು ತಿಳಿಸಿದರು.

ಗುರಿ ಸಾಧನೆಗೆ ಆಯ್ಕೆ ಮಾಡಿಕೊಂಡದ್ದು ಕ್ರಿಯಾಶೀಲ ರಚನೆಯಾದ ಮಹಾಕಾವ್ಯ ಮಾರ್ಗ. ಇದರಲ್ಲಿ ಹಲವಾರು ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಗುಣ ಮತ್ತು ಅವಗುಣಗಳು ಅಡಕವಾದ ಪಾತ್ರಗಳನ್ನು ಸೃಜಿಸಿದರು, ಆ ಮೂಲಕ ಜನತೆಗೆ ಮೌಲ್ಯಗಳನ್ನು ಬಿತ್ತಿದರು ಎಂದು ತಿಳಿಸಿದರು.

ಮಹಾಕಾವ್ಯವನ್ನು ಬಳಸಿಕೊಂಡು, ಭಕ್ತಿ ಮಾರ್ಗದ ಮೂಲಕ ಸಮಾಜದ ಪರಿವರ್ತನೆಗೆ ನಾಂದಿ ಹಾಡಿದ ವಾಲ್ಮೀಕಿ ಅಂದಿನಿಂದ ಇಂದಿನವರೆಗೂ ಸಮಾಜ ಪರಿವರ್ತನೆಯ ಹರಿಕಾರರು ಎಂದು ಬಣ್ಣಿಸಿದ ಪ್ರೊ. ರಾಜೇಶ್ವರಿ ಅವರು,
ವಾಲ್ಮೀಕಿ ಅವರ ಜಯಂತಿ ಆಚರಣೆಯನ್ನು ಮಾಡುವುದರ ಜತೆಗೆ ಅವರು ಸಮಾಜಕ್ಕೆ ನೀಡಿದ ಮಹಾಕಾವ್ಯ ರಾಮಾಯಣ ಓದಿ ಒಳ್ಳೆಯತನವನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಸಮಾಜದಲ್ಲಿ ಮೌಲ್ಯಗಳು ಸವೆಯುತ್ತಿವೆ, ಇಂತಹ ಸಂದಿಗ್ಧ ಸಮಯದಲ್ಲಿ ವಾಲ್ಮೀಕಿ ಅವರ ಮೌಲ್ಯಗಳು ಯುವ ಸಮೂಹ ಮತ್ತು ಸಮಾಜವನ್ನು ಸರಿ ದಾರಿಗೆ ತರುವ ಮಾರ್ಗವಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ. ಎಂ. ಅಬ್ದುಲ್ ರಹಿಮಾನ್ ಅವರು ವಾಲ್ಮೀಕಿ ಮಹರ್ಷಿ ಅವರ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.

ವಾಲ್ಮೀಕಿ ಅವರ ರಾಮಾಯಣ ಮಹಾ ಕಾವ್ಯ ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಮೊದಲನೆ ಸಾಲಿನಲ್ಲಿ ಬರುವ ಕೃತಿ. ಅದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಅಂತಹ ಸಂದೇಶ ನೀಡಿರುವ ಕೃತಿಯನ್ನು ಹೆಚ್ಚು ಅಧ್ಯಯನ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅವರ ಕರ್ತೃತ್ವವನ್ನು ಪ್ರಚುರಪಡಿಸುವ ಇನ್ನೂ ಹೆಚ್ಚು ರೀತಿಯ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.

ಸಾಮಾನ್ಯ ವ್ಯಕ್ತಿ ಒಬ್ಬರು, ಮಹರ್ಷಿ ಆಗುವುದು ಕೇವಲ ಅವರ ಧೀಶಕ್ತಿಯಿಂದ ಮಾತ್ರ ಸಾಧ್ಯ. ಅಂತಹ ಮಹಾನ್ ಚೇತನ ವಾಲ್ಮೀಕಿ. ಅವರ ಮಹಾಕಾವ್ಯ ಮತ್ತು ಅವರ ಜೀವನ ಸಾಧನೆ ಸದಾ ಅನುಕರಣೀಯ ಎಂದು ಹೇಳಿದರು.

ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಎನ್.ಎಸ್.ಎಸ್ ಅಧಿಕಾರಿ ಡಾ. ಲಕ್ಷ್ಮಣ ಬಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಚೇತನ ಮಲಗಾವಿ,
ಚೇತನ ಹಂಜಿ, ಅಲೋಕ ತಿಮ್ಮಪ್ಪ ಹೆಗಡೆ,
ಅಧ್ಯಾಪಕ ಸಂಘದ ಕಾರ್ಯದರ್ಶಿ ಡಾ.ರಮೇಶ್ ಕೆ. ಎಲ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು, ಖಜಾಂಚಿ ಬೃಂದಾ ಎನ್, ಸಾಂಸ್ಕೃತಿಕ ಸಮಿತಿ ಸದಸ್ಯರು, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.