ಮೈಸೂರು: ಚಾಮರಾಜನಗರ 5 ಸಾವಿರ ಎಕರೆ ಜಾಗ ನಮಗೆ ಸೇರಿದ ಕುರಿತು ಎಲ್ಲಾ ದಾಖಲೆಗಳಿವೆ, ಆದರೆ ನನ್ನ ಕಡೆಯಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದೇವಿ ಒಡೆಯರ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಮೋದೇವಿ ಒಡೆಯರ್, ಜನರಲ್ಲಿ ಯಾಕೆ ಆತಂಕ ಸೃಷ್ಟಿ ಆಯಿತೊ ಗೊತ್ತಿಲ್ಲ. ನಮ್ಮ ಕಡೆಯಿಂದ ಎಲ್ಲಾ ದಾಖಲೆಗಳನ್ನು 2014 ರಲ್ಲೇ ಕೊಟ್ಟಿದ್ದೇವೆ. ಡಿಸಿ ಅವರು ಏನು ಗೊತ್ತಿಲ್ಲ ದಾಖಲೆ ಇಲ್ಲ ಅನ್ನೋದಕ್ಕೆ ಆಗಲ್ಲ, ನಾವು ಮೊನ್ನೆ ಕೂಡ ಜಾಗಕ್ಕೆ ಸಂಬಂಧಪಟ್ಟ ದಾಖಲೆ ಕೊಟ್ಟಿದ್ದೇವೆ ಎಂದು ಹೇಳಿದರು.
ನಮಗೆ ಸೇರಿದ ಜಾಗಕ್ಕೆ ಎಲ್ಲಾ ದಾಖಲೆಗಳನ್ನು ಕೊಟ್ಟುಅದನ್ನು ಕಂದಾಯ ಭೂಮಿ ಮಾಡಬೇಡಿ ಎಂದು ಮನವಿ ಮಾಡಿದ್ದೇವೆ,ಗ್ರಾಮಸ್ಥರು ಯಾರು ಆತಂಕ ಪಡಬಾರದು, ಏನೇ ಸಮಸ್ಯೆ ಇದ್ದರೂ ನಮ್ಮನ್ನು ಭೇಟಿ ಮಾಡಿ,ನಮ್ಮ ಕಚೇರಿಗೆ ಬನ್ನಿ ಎಂದು ಮನವಿ ಮಾಡಿದರು.
ಮಹಾರಾಜರು ಗಿಫ್ಟ್ ಕೊಟ್ಟಿರೋ ಭೂಮಿಯನ್ನ ನಾವು ಕಿತ್ತುಕೊಳ್ಳುವ ಅಗತ್ಯ ನಮಗಿಲ್ಲ. ನಾನು ಈ ಹಿಂದೆಯೇ ಪತ್ರ ಬರೆದಿದ್ದೇವೆ. ಕಂದಾಯ ಗ್ರಾಮ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಅದಕ್ಕಾಗಿ ತಕರಾರು ಹಾಕಿದ್ದೇವೆ. ರಾಜರು ಗಿಫ್ಟ್ ಕೊಟ್ಟಿದ್ದರೆ ಅವರ ಬಳಿ ಪತ್ರ ಇರತ್ತೆ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಅಂತವರ ಜಾಗಕ್ಕೆ ನಾವು ಹೋಗುವುದಿಲ್ಲ. ಜನರು ಯಾವುದಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪದೇ ಪದೇ ಹೇಳಿದರು.
ನಮ್ಮ ಹೆಸರಿನ ಜಾಗದಲ್ಲಿ ಜನರು ಇದ್ದರೂ ಅವರಿಗೆ ಉಳಲು ಜಮೀನು ಕೊಡುತ್ತೇವೆ, ಯಥಾಸ್ಥಿತಿ ಇರುವ ಹಾಗೆ ನೋಡಿಕೊಳ್ಳುತ್ತೇವೆ, ನಮ್ಮ ಭೂಮಿಯಲ್ಲಿ ಅವರಿದ್ದರೂ ನಾವು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂದಾಯ ಗ್ರಾಮಕ್ಕೆ ನಮ್ಮ ವಿರೋಧವಿದೆ. ಅದರಲ್ಲಿ ನಮ್ಮ ಜಮೀನು ಇದೆ ಅಂತ ಅರ್ಜಿ ಹಾಕಿದ್ದೇವೆ. ಕಂದಾಯ ಗ್ರಾಮದ ಬಗ್ಗೆ ನಮಗೆ ಯಾರೂ ಮಾಹಿತಿ ನೀಡಿಲ್ಲ ಅದಕ್ಕಾಗಿ ತಕರಾರು ಅರ್ಜಿ ಹಾಕಿದ್ದೇವೆ ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.
ಚಾಮರಾಜನಗರದ ಜನರು ದಾಖಲೆಗಳಿದ್ದರೆ ಅರಮನೆಗೆ ಬಂದು ಕೊಡಲಿ. ಎಲ್ಲರನ್ನೂ ಮುಕ್ತವಾಗಿ ನೋಡುತ್ತೇವೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅಭಯ ನೀಡಿದರು.
ಕಂದಾಯ ವ್ಯಾಪ್ತಿಗೆ ಯಾವ ಯಾವ ಜಮೀನು ಬರತ್ತದೊ ಗೊತ್ತಿಲ್ಲ. ಜಿಲ್ಲಾಡಳಿತದಿಂದ ಯಾರು ಕೂಡ ಈ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ನಾವೇ ಡಿಸಿಗೆ ಒಂದು ಮೆಸೇಜ್ ಹಾಕಿದ್ದೇವೆ. ನನ್ನ ಮೆಸೇಜ್ ಗೆ ಅವರು ಉತ್ತರ ನೀಡಿಲ್ಲ ಎಂದು ಪ್ರಮೋದ ದೇವಿ ಬೇಸರ ವ್ಯಕ್ತಪಡಿಸಿದರು.
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರೆಯಲಿ:
ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧ ಮುಂದುವರೆಯಬೇಕು ಎಂದು ಇದೇ ವೇಳೆ ಪ್ರಮೋದಾದೇವಿ ಒಡೆಯರ್ ಒತ್ತಾಯಿಸಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಈಗಾಗಲೇ ರಾತ್ರಿ ಒಂಬತ್ತು ಗಂಟೆಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯವರೆಗೂ ಅವಕಾಶವಿದ್ದ ಮೇಲೆ ರಾತ್ರಿ ವೇಳೆ ಏಕೆ ಅವಕಾಶ ಕೊಡಬೇಕು ಎಂದು ಪ್ರಶ್ನಿಸಿದರು.
ರಾತ್ರಿ ಒಂಬತ್ತು ಗಂಟೆ ಆದ ಮೇಲೆ ಯಾರು ಓಡಾಡುವುದಿಲ್ಲ.ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಅರಣ್ಯ ಮತ್ತು ಪ್ರಾಣಿ ಸಂಕುಲಕ್ಕೆ ತೊಂದರೆಯಾಗುತ್ತದೆ, ಹಾಗಾಗಿ ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ತೆರವು ಮಾಡಬಾರದು ಎಂದು ಆಗ್ರಹಿಸಿದರು.
ಮೈಸೂರಿನ ಎಸ್ ಪಿ ಕಚೇರಿ ಬಳಿ ರಸ್ತೆಯಲ್ಲಿ ರಾತ್ರೋರಾತ್ರಿ ಬೃಹದಾಕಾರದ ಮರಗಳನ್ನು ಕಡಿದಿರುವುದಕ್ಕೆ ಪ್ರಮೋದಾದೇವಿ ಅವರು ಬೇಸರ ವ್ಯಕ್ತಪಡಿಸಿದರು.