ಮೈಸೂರು: ದಸರಾ ಉದ್ಘಾಟಕರ ವಿವಾದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಖುಷಿ ಪಟ್ಟಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮಾಜಿ ಸಂಸದ ಪ್ರತಾಪ್ ಸಿಂಹಾಗೆ ಪರೋಕ್ಷ
ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚುವರು,ಸಂವಿಧಾನ ಪೀಠಿಕೆ ಟೌನ್ ಹಾಲ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ, ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ,ಇದರ ಉದ್ದೇಶ ಬಹುತ್ವ ಕಾಪಾಡುವುದು, ಗೊಂದಲಕ್ಕೆ ಅನುಮಾನಕ್ಕೆ ಅಪಮಾನಕ್ಕೆ ದ್ವೇಷಕ್ಕೆ ಅವಕಾಶ ಇಲ್ಲ ಅಂತ ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳಿಗೆ ಸಂವಿಧಾನ ಬೀಗ ಹಾಕಿದೆ. ವಿರೋಧಿಗಳಿಗೆ ಇನ್ನು ಮುಂದಾದರೂ ಬುದ್ಧಿ ಬರಬೇಕು ಎಂದು ಟಾಂಗ್ ಕೊಟ್ಟರು.
ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು ಎಲ್ಲರೂ ಭಾಗಿಯಾಗಿ ಅಂತ ನಾನು ಆಹ್ವಾನ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾವು ಜಾತಿಗಣತಿ ಮಾಡುತ್ತಿರುವುದು ಪ್ರತಿಪ್ರಜೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಬದುಕು ಹೇಗಿದೆ ಎಂಬುದನ್ನು ತಿಳಿದುಕೊಳ್ಳೋದಕ್ಕೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ ಎಂದು ಪ್ರಶ್ನಿಸಿದರು.
ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನು ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರೂ ಟಾರ್ಗೆಟ್ ಮಾಡ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಅಂತ ಅಂಬೇಡ್ಕರ್ ಹೇಳಿದ್ದರು,ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ ಎಂದು ಪ್ರಶ್ನಿಸಿದರು.
ಬಲವಂತದ ಮತಾಂತರ ತಪ್ಪು,ಅದು ಅವರ ಹಕ್ಕು,ಸಚಿವ ಸಂಪುಟದಲ್ಲಿ ಯಾವ ಒಡಕು ಇರಲಿಲ್ಲ ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ, ಒಕ್ಕಲಿಗ ಸಮುದಾಯದವರು ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ ಎಂದು ಮಹದೇವಪ್ಪ ಹೇಳಿದರು.
ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇರೋದು ಒಂದೇ ಸಿಎಂ ಕುರ್ಚಿ,ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ,2028ರ ತನಕ ಅವರೇ ಕುಳಿತಿರುತ್ತಾರೆ, ಕಾರ್ಯಕರ್ತರಿಗೆ ಆಸೆ ಇದೆ, ಕೂಗುತ್ತಾರೆ ಎಂದು ಹೇಳುವ ಮೂಲಕ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯ ಮಂತ್ರಿ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.