(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಶಿವನಸಮುದ್ರದ ಶ್ರೀ ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ಈ ತಿಂಗಳೇ ಪೂರ್ಣಗೊಳಿಸುವಂತೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಖಡಕ್ ಸೂಚನೆ ನೀಡಿದರು.
2026 ರ ಜನವರಿ 25 ಅಥವಾ ಫೆಬ್ರವರಿ ಪ್ರಾರಂಭದಲ್ಲಿ ಜಗನ್ಮೋಹನ ರಂಗನಾಥ ಸ್ವಾಮಿ (ಮಧ್ಯರಂಗ) ದೇವಾಲಯವನ್ನು ಲೋಕಾರ್ಪಣೆ ಮಾಡಿ ಜನರ ದರ್ಶನಕ್ಕೆ ನೀಡಬೇಕಿದೆ ಹಾಗಾಗಿ ನವೆಂಬರ್ ಒಳಗೇನೆ ಕಾಮಗಾರಿ ಪೂರ್ಣಗೊಳಿಸುವಂತೆ
ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ಪ್ರಸಿದ್ಧ ಶಿವನಸಮುದ್ರದ ಶ್ರೀ ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕಳೆದ ಐದಾರು ವರ್ಷಗಳಿಂದ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಜಗನ್ಮೋಹನ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದಾರ ಕಾಮಗಾರಿ ಹಾಗೂ ಆಂಧ್ರ ಮೂಲದ ದಾನಿಗಳಿಂದ ರಂಗನಾಯಕಿ ಅಮ್ಮನವರ ದೇವಾಲಯಗಳ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇತ್ತೀಚೆಗೆ ವೇಗ ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಡನೆ ಭೇಟಿ ನೀಡಿ ಬಳಿಕ ಅಧಿಕಾರಿಗಳಿಗೆ ಕೆಲ ಸಲಹೆ ನೀಡಿದರು.
ದೇವಾಲಯದ ಸುತ್ತುಗೋಡೆ ದುರಸ್ತಿ, ರಂಗನಾಥ ಸ್ವಾಮಿ ದೇವಾಲಯದ ಒಳಗಡೆ ಇರುವ ವೀರ ಪಾಲಕರ ಗುಡಿಗಳಿಗೆ ಬಾಗಿಲುಗಳ ಅಳವಡಿಕೆ ಗರ್ಭಗುಡಿ ಚಪ್ಪರ ನಿರ್ಮಾಣ ದರ್ಶನಕ್ಕೆ ನಿಲ್ಲುವ ಭಕ್ತರ ಕ್ಯೂ ಲೈನ್ ನಿರ್ಮಾಣಕ್ಕೆ ಸ್ಟೇನ್ಲೆಸ್ ಸ್ಟೀಲ್ ಅಳವಡಿಕೆ, ನೆಲಹಾಸು, ಕಾಮಗಾರಿಗಳು ಮುಕ್ತಾಯ ಹಂತ ತಲುಪಿದ್ದು ಕಾಮಗಾರಿಗಳು ವೇಗ ಪಡೆದು ಕೊಂಡಿದೆ.
ರಾಜಗೋಪುರ, ವಿಮಾನ ಗೋಪುರ ಹಾಗೂ ಯೋಗ ಶಾಲೆಗೆ ಬಣ್ಣ ಬಳಿಸುವ ವಿಚಾರದ ಬಗ್ಗೆ ಚರ್ಚೆ ಆಯಿತು. ಮಲೆ ಮಹದೇಶ್ವರ ಬೆಟ್ಟದ ವಿಮಾನ ಗೋಪುರ ಹಾಗೂ ರಾಜಗೋಪುರಗಳಿಗೆ ಬಣ್ಣ ಬಳಿದವರು ಚೆನ್ನಾಗಿ ಮಾಡಿದ್ದು, ಅವರಿಂದಲೇ ಇಲ್ಲಿಗೂ ಬಣ್ಣ ಬಳಿಸುವುದು ಎಂದು ತೀರ್ಮಾನಿಸಲಾಯಿತು.
ಅದಕ್ಕಾಗಿ ಮ.ಮ. ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ದೇವಾಲಯಕ್ಕೆ ಬಣ್ಣ ಬಳಿದವರು ಯಾರು ಅವರಿಂದಲೇ ಇಲ್ಲಿಗೆ ಬಣ್ಣ ಬಯಸುವ ಜವಾಬ್ದಾರಿ ನಿಮ್ಮದು ಎಂದು ಶಾಸಕರು ಸೂಚಿಸಿದರು.
ಮುಖ್ಯ ದ್ವಾರಗಳ ಬಾಗಿಲುಗಳು ಚೆನ್ನಾಗಿ ಮೂಡಿಬಂದಿದೆ, ದೇವಾಲಯದಲ್ಲಿ ಅಳವಡಿಸಲಾಗಿರುವ ಕಲ್ಲುಗಳ ಬಣ್ಣ ಮಾಸಿದ್ದು ಕಾಮಗಾರಿಗೆ ಆಧುನಿಕ ಸ್ಪರ್ಶ ನೀಡಬೇಕು ಎಲ್ಲಾ ಕಲ್ಲುಗಳಿಗೂ ಸ್ಯಾನ್ ಬ್ಲಾಸ್ಟ್ ಮಾಡಿಸುವಂತೆ ತಹಸೀಲ್ದಾರ್ ಬಸವರಾಜು ರವರಿಗೆ ಸೂಚಿಸಿದರು
ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿಸಿ ಯಾವುದೇ ಕಾರಣಕ್ಕೂ ಕಳಪೆ ಮಾಡಿಸಬೇಡಿ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಸೂಚಿಸಿದಾಗ ಧ್ವನಿಗೂಡಿಸಿದ ಶಾಸಕರು ಕಳಪೆ ಕಾಮಗಾರಿ ಮಾಡಿಸಿದ ವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲಾ ಕಾಮಗಾರಿಗಳು 2026ರ ಜನವರಿ 4ಕ್ಕೆ ಮುಕ್ತಾಯಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಇದೇ ವೇಳೆ ದೇವಾಲಯದ ಮುಂಭಾಗದ ರಾಜಭೀದಿಯಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಕಟ್ಟಡಕ್ಕೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲದ್ದನ್ನು ಮನಗಂಡ ಜಿಲ್ಲಾಧಿಕಾರಿ ಹಾಗೂ ಶಾಸಕರು ಇಲ್ಲಿ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಅನುದಾನವನ್ನು ನೀಡಲಾಗುವುದು ಅದಕ್ಕಾಗಿ ಏಜೆನ್ಸಿ ಗುರುತಿಸುವಂತೆ ಶಾಸಕರಿಗೆ ಜಿಲ್ಲಾಧಿಕಾರಿಗಳು ಹೇಳಿದರು.
ಹಳೆ ವೈಭವ ಮರುಕಳಿಸುವಂತಹ ವಾತಾವರಣ ನಿರ್ಮಾಣ ಮಾಡಲು ದೇವಸ್ಥಾನದ ಮುಂಭಾಗ ಇರುವ ರಾಜಭೀದಿಯನ್ನು ಹನ್ನೆರಡು ಕಾಲು ಮಂಟಪದವರೆಗೂ ಪುನರುಜ್ಜೀವನ
ಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಇಒ ಗುರುಶಾಂತಪ್ಪ, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ,ನಿರ್ಮಿತಿ ಕೇಂದ್ರದ ಇಇ ರವಿಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಸುರೇಶ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
