(ವಿಶೇಷ ವರದಿ: ಡಿ.ಸಿದ್ದರಾಜು ಕೊಳ್ಳೇಗಾಲ)
ಕೊಳ್ಳೇಗಾಲ: ಸುಪ್ರಸಿದ್ದ ಧಾರ್ಮಿಕ ತಾಣ ಮಲೈ ಮಹದೇಶ್ವರ ಬೆಟ್ಟದಲ್ಲಿ ನಾಳೆಯಿಂದ (ಫೆ. ೨೫ ರಿಂದ ಮಾ.೦೧ ರವರೆಗೆ) ೫ ದಿನಗಳ ಕಾಲ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಜರುಗಲಿದೆ.

ಪವಾಡ ಪುರುಷ ಮಲೆ ಮಹದೇಶ್ವರ ನೆಲೆನಿಂತ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಾದಪ್ಪನ ಭಕ್ತರು ಕಾಲ್ನಡಿಗೆಯಲ್ಲಿ ಕಳೆದ ೩-೪ ದಿನಗಳಿಂದ ಬಂದು ಸೇರುತ್ತಿರುವುದರಿಂದ ಬೆಟ್ಟದಲ್ಲಿ ಎತ್ತ ನೋಡಿದರು ಜನ ಸಾಗರವೇ ಕಾಣುತ್ತಿದೆ.

ಈಗಾಗಲೇ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಜಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಮಾದಪ್ಪನ ಸನ್ನಿಧಿ ಮಹಾಶಿವರಾತ್ರಿ ಜಾಗರಣೆಗೆ ಸಜ್ಜುಗೊಂಡಿದೆ.
ನಾಳೆ ಫೆ. ೨೫ ರಂದು ಪ್ರಾರಂಭವಾಗುವ ಜಾತ್ರೆಯಲ್ಲಿ ಸಾಲೂರು ಮಠಕ್ಕೆ ಉತ್ಸವ ಮೂರ್ತಿಯನ್ನು ಬಿಜಯಂಗೈಸುವುದು, ೨೬ ರಂದು ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಸ್ವಾಮಿಗೆ ಪ್ರಿಯವಾದ ಎಣ್ಣೆಮಜ್ಜನ ಸೇವೆ ವಿಶೇಷ ಸೇವೆ ಹಾಗೂ ಉತ್ಸಾವಾದಿಗಳು ಹಾಗೂ ಜಾಗರಣೆ ಉತ್ಸವ ನಡೆಯಲಿದೆ, ೨೭ ಹಾಗೂ ೨೮ ರಂದು ಅಮಾವಾಸ್ಯೆ ವಿಶೇಷ ಪೂಜೆಗಳು ನೆರವೇರಲಿವೆ.

ಮಾ. ೦೧ ರಂದು ಬೆಳಿಗ್ಗೆ ೮.೧೦ ರಿಂದ ೮.೪೫ ರ ವರೆಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ನಂತರ ಗುರು ಬ್ರಹೋತ್ಸವ ನಂತರ ಅನ್ನ ಬ್ರಹೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ ಪೂಜೆ ಮುಗಿದ ಮೇಲೆ ಶ್ರೀ ಸ್ವಾಮಿಯ ಕೊಂಡೋತ್ಸವ ನಡೆಯಲಿದೆ.
‘
ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು. ಕಾವೇರಿ ನದಿಯ ಉತ್ತರದಾಚೆ ಇರುವ ಮಂಡ್ಯ, ಕೆ.ಎಂ ದೊಡ್ಡಿ, ರಾಮನಗರ, ಚನ್ನಪಟ್ಟಣ, ಬಿಡದಿ, ಕನಕಪುರ, ಚಿಕ್ಕನಾಯಕನಹಳ್ಳಿ, ಹಾರೋಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಲಕ್ಷಾಂತರ ಮಾದಪ್ಪನ ಭಕ್ತರು ಕಾಲ್ನಡಿಗೆಯಲ್ಲಿ ಕಳೆದ ೩-೪ ದಿನಗಳಿಂದ ಸಂಗಮ, ಮೇಕೆದಾಟು ಬಸವನಕಡುವಿನ ಮೂಲಕ ಕಾವೇರಿ ನದಿ ದಾಟಿ ಕಾವೇರಿ ಕಣಿವೆಯ ದಕ್ಷಿಣ ಭಾಗದಲ್ಲಿರುವ ಹನೂರು ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮ ಶಾಗ್ಯ ವಲಯದ ಮೂಲಕ ಕಾಲ್ನಡಿಗೆಯಲ್ಲಿ ತಮಟೆ ಕಂಸಾಳೆ ಸದ್ದಿನೊಂದಿಗೆ ಮಲೆ ಮಹದೇಶ್ವರ ಮಹಿಮೆ ಗೀತೆಗಳನ್ನು ಹಾಡಿ ಹೆಜ್ಜೆ ಹಾಕುತ್ತಾ … ಉಘ… ಉಘೇ… ಮಾದಪ್ಪ.. ಉಘೇ.. ಮಾಯ್ಕಾರ ಎಂಬ ಜೈಕಾರ ಮೊಳಗಿಸುತ್ತಾ ಆಗಮಿಸುತ್ತಿದ್ದಾರೆ.

ವಯೋವೃದ್ದರು, ಮಕ್ಕಳು, ಮಹಿಳೆಯರು, ಪುರುಷರು, ಯುವಕ-ಯುವತಿಯರು ಹಾಗೂ ಹರಕೆ ಹೊತ್ತ ಭಕ್ತರು ಉರಿಬಿಸಿಲು, ಕಲ್ಲು-ಮುಳ್ಳು ಲೆಕ್ಕಿಸದೆ ಕಾನನದ ಮೂಲಕ ತೆರಳಿ ಶಾಗ್ಯ ಕಳ್ಳಿದೊಡ್ಡಿ ತಲುಪಿದ್ದಾರೆ.
ಕಾವೇರಿ ನದಿ ದಾಟಿ ಬಂದ ಭಕ್ತರು ಶಾಗ್ಯ ಹಾಗೂ ಕಳ್ಳಿದೊಡ್ಡಿ ಗ್ರಾಮಗಳಲ್ಲಿ ರಾತ್ರಿ ಹಗಲು ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆದು ನಂತರ ಎಲ್ಲೇ ಮಾಳ ಕೌದಳ್ಳಿ ಮೂಲಕ ಪಾದಯಾತ್ರೆ ಮೂಲಕ ತಂಡೋಪ ತಂಡವಾಗಿ ನಡೆದು ಅದಾಗಲೇ ಮಲೈ ಮಹದೇಶ್ವರ ಬೆಟ್ಟ ತಲುಪಿದ್ದಾರೆ.

ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಕಾವೇರಿ ತೀರ ಹಾಗೂ ಶಾಗ್ಯ ಗ್ರಾಮದಲ್ಲಿ ದಾನಿಗಳು ಹಾಗೂ ಸುತ್ತ-ಮುತ್ತಲ ಗ್ರಾಮಗಳ ಮಾದಪ್ಪನ ಭಕ್ತರು ದೇಣಿಗೆ ಸಂಗ್ರಹಿಸಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ.
ಭಕ್ತರ ದಣಿವು ನೀಗಿಸಲು ಮ.ಮ.ಬೆಟ್ಟ ರಸ್ತೆಯ ಅಲ್ಲಲ್ಲಿ ಕೆಲವು ಗ್ರಾಮಗಳ ಜನರು ಹಾಗೂ ಹಲವಾರು ದಾನಿಗಳು ಕುಡಿಯುವ ನೀರು, ಮಜ್ಜಿಗೆ, ಪಾನಕ, ಕಲ್ಲಂಗಡಿ ಹಣ್ಣು ನೀಡಿ ನೆರಳು ವ್ಯವಸ್ಥೆ ಮಾಡಿದ್ದಾರೆ.
ಕಳೆದ ೨೦೨೨ ರ ಮಹಾಶಿವರಾತ್ರಿ ಜಾತ್ರೆ ಸಂದರ್ಭದಲ್ಲಿ ಮೇಕೆದಾಟು ಬಳಿ ಕಾವೇರಿ ನದಿ ದಾಟುತ್ತಿದ್ದ ವೇಳೆ ನದಿಯಲ್ಲಿ ನೀರು ಹೆಚ್ಚಾಗಿ ಐದು ಮಂದಿ ಯಾತ್ರಾರ್ಥಿಗಳು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದುದು ಇನ್ನೂ ಮಾಸಿಲ್ಲ.
ಹಾಗಾಗಿ ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲಾಡಳಿತಕ್ಕೆ ಪತ್ರ ಬರೆದು ನದಿಯಲ್ಲಿ ನೀರು ತಗ್ಗಿಸುವಂತೆ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕಾವೇರಿ ನದಿ ದಾಟಿಸುವಂತೆ ಸೂಚಿಸಿದ್ದಾರೆ.
ಆದ್ದರಿಂದ ರಾಮನಗರ ಜಿಲ್ಲಾಡಳಿತ ನದಿ ದಡದಲ್ಲಿ ವಾಸ್ತವ ಹೂಡಿ ಯಾತ್ರಾರ್ತಿಗಳನ್ನು ಸುರಕ್ಷಿತವಾಗಿ ನದಿ ದಾಟಿಸಿದ್ದಾರೆ. ಈ ಬಾರಿ ಮುಂಜಾಗ್ರತಾ ಕ್ರಮವಾಗಿ ನದಿ ದಾಟುತ್ತಿರುವ ಪಾದಯಾತ್ರಿಗಳಿಗೆ ಎಡ ಹಾಗೂ ಬಲದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಹಿಡಿದುಕೊಂಡಿದ್ದು ಮಧ್ಯದಲ್ಲಿ ಪಾದಯಾತ್ರಿಯನ್ನು ಸುರಕ್ಷಿತವಾಗಿ ದಾಟಿಸಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆ ಇದೆ ಹರಕೆ ಹೊತ್ತ ಭಕ್ತಧಿಗಳು ಹಗಲು-ರಾತ್ರಿ ಚಳಿ ಬಿಸಿಲು ನೆಕ್ಕಿಸದೆ ಶ್ರೀ ಕ್ಷೇತ್ರದತ್ತ ಪಾದಯಾತ್ರೆ ಬೆಳೆಸಿದ್ದಾರೆ.
ಇನ್ನು ಶ್ರೀ ಕ್ಷೇತ್ರದಲ್ಲಿ ೫ ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸಲಿರುವುದರಿಂದ ಈಗಾಗಲೇ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ಜಾತ್ರೆಗೆ ಸಕಲ ಸಿದ್ದತೆ ಮಾಡಿದೆ.
ಭಕ್ತರು ತಂಗುವ ತಂಗದಾಣಗಳನ್ನು ಪೌರಕಾರ್ಮಿಕರಿಂದ ಸ್ವಚ್ಚಗೊಳಿಸಲಾಗಿದೆ. ತಾಳುಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರ ೫೦ ಕ್ಕೂ ಹೆಚ್ಚು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರಿಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ೧೦೦೦ ಲೀಟರ್ ಸಾಮರ್ಥ್ಯದ ೨೦ ಕುಡಿಯುವ ನೀರಿನ ಟ್ಯಾಂಕ್ ಇಡಲಾಗಿದ್ದು ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸುಗಮ ಸಂಚಾರಕ್ಕೆ ರಸ್ತೆ ಸಾರಿಗೆ ವಿಭಾಗಿಯ ನಿಯಂತ್ರಣಾಧಿಕಾರಿ ಅಶೋಕ್ ಅವರು ೬೦೦ ಕೆ.ಎಸ್.ಆರ್.ಟಿ.ಸಿ ಬಸ್ ಓಡಿಸುತ್ತಿದ್ದು ಖಾಸಗಿ ಬಸ್ ಗಳನ್ನು ಸಹ ಓಡಿಸಲಾಗುತ್ತಿದೆ.
ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮ ವಹಿಸಿದ್ದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಇಬ್ಬರು ಡಿ.ವೈ.ಎಸ್.ಪಿ, ೯ ವೃತ್ತ ನಿರೀಕ್ಷಕರು, ೩೨ ಪಿಎಸ್.ಐ, ೬೭ ಎ.ಎಸ್.ಐ, ೪೨೧ ಪೇದೆ ಹಾಗೂ ಮುಖ್ಯ ಪೇದೆಗಳು ೯೮ ಮಹಿಳಾ ಪೇದೆಗಳು, ೪೦೧ ಗೃಹರಕ್ಷಕ ಸಿಬ್ಬಂದಿ ೪ ಡಿ.ಎ.ಆರ್ ತುಕಡಿ, ೨ ಕೆ.ಎಸ್.ಆರ್.ಪಿ ತುಕಡಿ ಸೇರಿದಂತೆ ಸುಮಾರು ೯೦೦ ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಇದಲ್ಲದೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ. ಆದರೆ ಶಿವರಾತ್ರಿ ವೇಳೆ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಡೆಯಿಂದ ಬರುವ ಪಾದಯಾತ್ರಿಗಳಿಗೆ ಸಿಗುವಂತಹ ಸೌಲಭ್ಯ ಈ ಮಾರ್ಗವಾಗಿ ಬರುವ ಭಕ್ತರಿಗೆ ಸಿಗುವುದಿಲ್ಲ. ಪ್ರತಿ ಜಾತ್ರೆ ವೇಳೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಮೈಸೂರು, ಮಂಡ್ಯ, ಚಾಮರಾಜನಗರ ಪಾದಯಾತ್ರಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಯಾಗುತ್ತದೆ.
ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ.
ಮಾದಪ್ಪನ ಲಕ್ಷಾಂತರ ಭಕ್ತರು ಶ್ರದ್ಧ-ಭಕ್ತಿಯಿಂದ ಬರಿಕಾಲಲ್ಲಿ ಕಟ್ಟುನಿಟ್ಟಾಗಿ ಪಾದಯಾತ್ರೆ ಕೈಗೊಳ್ಳುತ್ತಾರೆ. ಮೊದಲೆ ಬೇಸಿಗೆಯಾದುದರಿಂದ ಬರಿ ಕಾಲಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಅಲ್ಲಲ್ಲಿ ರಸ್ತೆಗಳಿಗೆ ಜಿಲ್ಲಾಡಳಿತ ನೀರನ್ನು ಸಿಂಪಡಿಸಿ, ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಿ ಬಯಲು ಮುಕ್ತ ಶೌಚಾಲಯ ಮಾಡಿದರೆ ಪಾದಯಾತ್ರಿಗಳಿಗೆ ಒಳಿತಾಗಲಿದೆ.
ಜತೆಗೆ ಅಲ್ಲಲ್ಲಿ ಉಚಿತ ವೈದ್ಯಕೀಯ ಸೇವೆ ಅಥವಾ ಸಂಚಾರಿ ವೈದ್ಯಕೀಯ ಸೇವೆ ಮಾಡಿದರೆ ಪಾದಯಾತ್ರಿಗಳಿಗೆ ಸಮಸ್ಯೆಯಾದಲ್ಲಿ ತಕ್ಷಣದ ಪರಿಹಾರ ಸಿಗುವಂತಾಗುತ್ತದೆ.
ಶುದ್ದ ಕುಡಿಯುವ ನೀರಿನ ಜೊತೆಗೆ ಶುದ್ಧ ಊಟದ ವ್ಯವಸ್ಥೆ ಮಾಡಿದರೆ ಭಕ್ತಾಧಿಗಳಿಗೆ ಪಾದಯಾತ್ರೆ ಕೈಗೊಳ್ಳಲು ಶಕ್ತಿ ತುಂಬುತ್ತದೆ.
ಇದು ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯವಾಗಿದೆ.
ಕಾರಣ ಮಾದಪ್ಪನ ಸನ್ನಿಧಾನಕ್ಕೆ ಬರುವ ಇಂತಹ ಕೋಟ್ಯಾಂತರ ಜನರು ಭಕ್ತಿಯಿಂದ ಕೊಡುವ ಕಾಣಿಕೆಯೆ ಕೋಟಿಗಳ ಲೆಕ್ಕದಲ್ಲಿದೆ.. ಇದೇ ಹಣವನ್ನು ಉಪಯೋಗಿಸಿಕೊಂಡು ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು.
ಒಂದು ವೇಳೆ ಸರ್ಕಾರ ಮಾಡಲಾಗದಿದ್ದರೆ ಭಕ್ತಾಧಿಗಳು ಅಥವಾ ಸಂಘ ಸಂಸ್ಥೆಗಳು ಇದನ್ನು ಮಾಡಲು ಪ್ರೇರಣೆಯಾಗಲಿ ಎಂಬುದು ಮಾದಪ್ಪನ ಭಕ್ತರ ಒತ್ತಾಸೆಯಾಗಿದೆ.