(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಏ.6: ಪ್ರೀತಿಸಿದವಳು ಮದುವೆ ನಿರಾಕರಿಸಿದಳು ಎಂಬ ಕಾರಣಕ್ಕೆ ಮನನೊಂದ ಪ್ರೇಮಿಯೊಬ್ಬ ಹುಣಸೆ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಜಾಗರಿಯ ಶಿಲ್ವೈಪುರ ಗ್ರಾಮದ ಶೇಷು ರಾಜು ಅವರ ಮಗ ಜಾನ್ಸನ್ ವಿಜಿ (22) ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ.
ಈತ ಮಂಡ್ಯದ ಕಲ್ಲು ಕೋರೆಯೊಂದರಲ್ಲಿ ಕಾರ್ಮಿಕ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದ.
ಕಳೆದ ಎರಡು ವರ್ಷಗಳಿಂದ ಸಮೀಪದ ಸಿ.ಆರ್.ನಗರದ ಜಪಮಾಲೆ ಎಂಬುವರ ಮಗಳು 21 ವರ್ಷದ ಮೇರಿ ಅಂಜಲಿ ಎಂಬುವುದನ್ನು ಪ್ರೀತಿಸುತ್ತಿದ್ದ.
ಮೇರಿ ಅಂಜಲಿ ಮಂಗಳೂರಿನ ಕಾಲೇಜಲ್ಲಿ ವ್ಯಾಸಂಗ ಮಾಡಿಕೊಂಡು ಅಲ್ಲಿಯೇ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದಳು.
ಇವರಿಬ್ಬರ ಪ್ರೀತಿಗೆ ಅಂಜಲಿ ಪೋಷಕರ ತೀವ್ರ ವಿರೋಧವಿತ್ತು.
ಕಳೆದ ಒಂದುವರೆ ವರ್ಷಗಳಿಂದ ಮೇರಿ ಅಂಜಲಿ ಮಂಗಳೂರು ತೊರೆದು ಜಾನ್ಸನ್ ವಿಜಿ ಕೆಲಸ ಮಾಡುತ್ತಿದ್ದ ಮಂಡ್ಯದಲ್ಲಿ ಬಂದು ಒಟ್ಟಿಗೆ ಉಳಿದುಕೊಂಡಿದ್ದರು.
ಆರು ತಿಂಗಳಿಂದೀಚೆಗೆ ಇಬ್ಬರು ಮಂಡ್ಯ ತೊರೆದು ಸ್ವಗ್ರಾಮ ಶಿಲ್ವೈಪುರಕ್ಕೆ ಬಂದು ಬೇರೆ ಮನೆ ಮಾಡಿಕೊಂಡು ವಾಸವಿದ್ದರು.
ಇಲ್ಲಿಗೆ ಬಂದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಗ್ರಾಮದ ಮುಖಂಡರು ಇಬ್ಬರಿಗೂ ಒಟ್ಟಿಗೆ ಜೀವನ ಮಾಡಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದರು.
ಮತ್ತೆ ಇಬ್ಬರು ಜಗಳ ಮಾಡಿಕೊಂಡು ಮೇರಿ ಅಂಜಲಿ ಇದೆ ಏಪ್ರಿಲ್ 3 ರಂದು ಇಲ್ಲಿನ ಗ್ರಾಮಾಂತರ ಠಾಣೆಗೆ ಬಂದು ವಿಜಿ ವಿರುದ್ಧ ದೂರು ನೀಡಿದ್ದಳು.
ದೂರು ಸ್ವೀಕರಿಸಿದ ಗ್ರಾಮಾಂತರ ಠಾಣೆ ಎ ಎಸ್ ಐ ಮಲ್ಲಿಕಾರ್ಜುನ ಸ್ವಾಮಿ ಮುಖಂಡರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಲು ಮುಂದಾದರೂ ಮೇರಿ ಅಂಜಲಿ ಈತ ತುಂಬಾ ಕುಡಿಯುತ್ತಾನೆ ಈತನನ್ನು ಮದುವೆಯಾದರೆ ನನ್ನ ಜೀವನ ಹಾಳಾಗುತ್ತದೆ ಎಂದು ಜಾನ್ಸನ್ ವಿಜಿಯನ್ನು ಮದುವೆಯಾಗಲು ಕಡಕ್ಕಾಗೇ ನಿರಾಕರಿಸಿದ್ದಳು.
ಇದರಿಂದ ಮನನೊಂದು ಜಾನ್ಸನ್ ವಿಜಿ ಮೇರಿ ಅಂಜಲಿಯನ್ನು ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರು ಇದನ್ನು ಧಿಕ್ಕರಿಸಿ ಠಾಣೆಯಿಂದ ಹೊರ ಹೋದಳು.
ಮಾರನೆಯ ದಿನ ಮೇರಿ ಅಂಜಲಿ ಬೆಂಗಳೂರಿಗೆ ಹೊರಟು ಹೋಗಿದ್ದಳು. ಇದೆಲ್ಲದರಿಂದ ಜಿಗುಪ್ಸೆಗೊಂಡ ಜಾನ್ಸನ್ ವಿಜಿ ತಮ್ಮ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಸೀರೆಯಿಂದ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮೃತನ ತಂದೆ ಶೇಷುರಾಜು ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.